ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದು, ಅದರ ಅಂಗವಾಗಿ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಜಾತಿಗಣತಿ ಸಮೀಕ್ಷೆ ಮೇ ೫ರಂದು ಆರಂಭವಾಗಲಿದ್ದು, ಈ ವಿಷಯದಲ್ಲಿ ಮಾದಿಗರ ಪಾತ್ರವೇನು ವಿಷಯ ಕುರಿತು ಚರ್ಚಿಸಲು ಏ.೨೭ರಂದು ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ನೇತೃತ್ವದ್ಲಲಿ ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏ.೨೭ರ ಮಧ್ಯಾಹ್ನ ೩ ಗಂಟೆಗೆ ಸಭೆ ಆಯೋಜಿಸಿದ್ದು, ಸಭೆಗೂ ಮುನ್ನ ೧.೩೦ರಿಂದ ೨.೩೦ರ ವರೆಗೆ ಭೋಜನ ವ್ಯವಸ್ತೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ರಾಜ್ಯದಲ್ಲಿ ಜಾತಿಗಣತಿ ನಡೆಸಿ, ಬಳಿಕ ಒಳಮೀಸಲಾತಿ ಜಾರಿಗೊಳಿಸುವುದು ಸೂಕ್ತವೆಂಬ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣ ಆಯೋಗದ ಶಿಫಾರಸ್ಸು ಮೇರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯಕ್ಕೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಮಾದಿಗರ ಪಾತ್ರವೇನು ಎಂಬ ವಿಷಯ ಕುರಿತು ಚರ್ಚಿಸಲು ಮಾದಿಗ ಮತ್ತು ಸಂಬಂಧಿತ ಜಾತಿಗಳಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಕ್ರಮಕೈಗೊಳ್ಳುವ ಕುರಿತು ಸಭೆಯನ್ನು ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಒಳಮೀಸಲಾತಿ ಜಾರಿಗಾಗಿ ಹೋರಾಟ ನಡೆಸಿದ ಎಡ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಾದಿಗ ಮತ್ತು ಸಂಬಂಧಿತ ಜಾತಿಗಳ ಮುಖಂಡರು, ಸಂಘಟನೆ ಪದಾಧಿಕಾರಿಗಳು, ಸಮುದಾಯದ ಹಾಲಿ-ಮಾಜಿಗಳಾದ ಸಚಿವರು, ಶಾಸಕರು, ಸಂಸದರು, ಬುದ್ಧಿಜೀವಿಗಳು, ಚಿಂತಕರು, ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಂಭೀರ ಚರ್ಚೆ ನಡೆಸುವುದು ಅಗತ್ಯವಿದೆ.
ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ನೀವುಗಳು ಬೇಡ ಎಂದರೂ ಒಳಮೀಸಲಾತಿ ಜಾರಿಗೊಳಿಸಿಯೇ ಸಿದ್ದವೆಂದು. ತಿಳಿಸಿ ಸರ್ವರಿಗೂ ಸಮಪಾಲು ಎಂಬ ಚಿಂತನೆ ಹೊಂದಿರುವ ಮುಖ್ಯಮಂತ್ರಿ ಅವರು, ಯಾವ ಸಮುದಾಯಕ್ಕೂ ಅನ್ಯಾಯ ಮಾಡುವುದಿಲ್ಲ.
ನೊಂದ, ಅಸ್ಪೃಶ್ಯ ಸಮಾಜಕ್ಕೆ ನ್ಯಾಯ ಕೊಡದೆ ವಿರಮಿಸುವುದಿಲ್ಲವೆಂಬ ಹೇಳಿಕೆ ನಮ್ಮಲ್ಲಿ ಅತ್ಯಂತ ವಿಶ್ವಾಸ ಮೂಡಿಸಿದ್ದು, ಅವರ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲುವ ಜೊತೆಗೆ ಮಾದಿಗ ಮತ್ತು ಸಂಬಂಧಿತ ಜಾತಿಗಳಲ್ಲಿ ಜಾಗೃತಿ ಮೂಡಿಸುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ.ಆದ್ದರಿಂದ ಸಭೆಗೆ ಮಾದಿಗ ಮತ್ತು ಸಂಬಂಧಿತ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೆಚ್.ಆಂಜನೇಯ ಕೋರಿದ್ದಾರೆ.