ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖ್ಯಾತ ಬಾಹ್ಯಾಕಾಶ ವಿಜ್ಞಾನಿ
, ‘ಪದ್ಮವಿಭೂಷಣಪ್ರಶಸ್ತಿ ಪುರಸ್ಕೃತ ಡಾ.ಕೆ.ಕಸ್ತೂರಿರಂಗನ್(84) ಅವರು ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಭಾನುವಾರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕಸ್ತೂರಿರಂಗನ್ 1994 ರಿಂದ 2003ರ ಅವಧಿಯಲ್ಲಿ 9 ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಹೆಚ್ಚಿನ ಹೆಸರು ಮಾಡಿದ್ದರು. ಈ ಅವಧಿಯಲ್ಲಿ ಇಸ್ರೋ ಹಲವು ಸಾಧನೆಗಳನ್ನು ಮಾಡುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

ಭಾರತದ ಪ್ರತಿಷ್ಠಿತ ಉಡಾವಣಾ ವಾಹನವಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯಶಸ್ವಿ ಉಡಾವಣೆಯ ಜೊತೆಗೆ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ)ನ ಮೊದಲ ಯಶಸ್ವಿ ಹಾರಾಟ ಪರೀಕ್ಷೆಯೂ ಸೇರಿದಂತೆ ಹಲವಾರು ಪ್ರಮುಖ ಮೈಲಿಗಲ್ಲುಗಳಿಗೆ ಇವರು ಸಾಕ್ಷಿಯಾಗಿದ್ದರು.
ಇಸ್ರೋ ಮುಖ್ಯಸ್ಥರಾಗುವ ಮುನ್ನ ಕಸ್ತೂರಿರಂಗನ್ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಈ ಅವಧಿಯಲ್ಲಿ ನೂತನ ಬಾಹ್ಯಾಕಾಶ ನೌಕೆ, ಇನ್​ಸ್ಯಾಟ್-2 ಮತ್ತು ಭಾರತೀಯ ದೂರ ಸಂವೇದಿ ಉಪಗ್ರಹಗಳ (IRS-1A & 1B) ಹಾಗೂ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ಧಿಗೆ ಕಸ್ತೂರಿ ರಂಗನ್ ಶ್ರಮಿಸಿದ್ದರು. ಹಾಗೆಯೇ ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ್-I ಮತ್ತು II ಯೋಜನಾ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು.

ವಿಶ್ವದ ಅತ್ಯುತ್ತಮ ನಾಗರಿಕ ಉಪಗ್ರಹಗಳಾದ ಐಆರ್‌ಎಸ್-1ಸಿ ಮತ್ತು 1ಡಿ ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉಡಾವಣೆ, ಎರಡು ಮತ್ತು ಮೂರನೇ ತಲೆಮಾರಿನ ಇನ್‌ಸಾಟ್ ಉಪಗ್ರಹಗಳು, ಸಾಗರ ವೀಕ್ಷಣಾ ಉಪಗ್ರಹಗಳಾದ ಐಆರ್‌ಎಸ್-ಪಿ3/ಪಿ4 ಅನ್ನು ಯಶಸ್ವಿ ಉಡಾವಣೆ ಮಾಡುವ ಮೂಲಕ ಭಾರತ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಮೊದಲ ಆರು ದೇಶಗಳಲ್ಲಿ ಒಂದಾಯಿತು. ಇಸ್ರೋ ಈ ಮೈಲಿಗಲ್ಲು ಸಾಧಿಸಲು ಕಸ್ತೂರಿರಂಗನ್ ಪ್ರಮುಖ ಪಾತ್ರವಹಿಸಿದ್ದರು.

ಸದ್ಯ ಯೋಜನಾ ಆಯೋಗದ ಸದಸ್ಯರೂ ಆಗಿದ್ದ ಕಸ್ತೂರಿ ರಂಗನ್ ಅವರು ಜವಾಹರಲಾಲ್ ನೆಹರೂ ವಿವಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯಸಭೆ (2003-2009) ಸದಸ್ಯರಾಗಿಯೂ ಆಯ್ಕೆ ಆಗಿದ್ದರು.

Share This Article
error: Content is protected !!
";