ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಫುಡ್ ಡೆಲಿವರಿ ಬಾಯ್ಗಳ ಮೊಬೈಲ್ಗಳನ್ನೇ ಗುರಿಯಾಗಿಸಿ ನೇಪಾಳಿ ಮೂಲದ ನಾಲ್ವರು ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ಳಂದೂರು ಠಾಣೆ ಪೊಲೀಸರು ಮಂಚಿನ ಕಾರ್ಯಾಚರಣೆ ಮಾಡಿ ಬಂಧಿತ ಆರೋಪಿಗಳಿಂದ 9 ಮೊಬೈಲ್ ಪೋನ್ಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ಧಾರೆ.
ಆರೋಪಿತರಿಂದ ದರೋಡೆಗೊಳಗಾದ ಸುರೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ನೇಪಾಳ ಮೂಲದ ಪಾರಸ್ ಸಿಂಗ್ (25), ಮುಕೇಶ್ ಸಾಯಿ (19), ಬಿಪಿನ್ ಕರ್ಕಿ (20), ಸಮೀರ್ ಲೋಹಾರ್ ಎಂಬುವವರನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕೊಡತಿ ಗೇಟ್ ಬಳಿ ವಾಸವಾಗಿದ್ದರು. ಜೀವನಕ್ಕಾಗಿ ನಗರದ ಖಾಸಗಿ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಸುಲಭವಾಗಿ ಹಣ ಸಂಪಾದನೆ ಮಾಡಲು ಸಂಚು ರೂಪಿಸಿ ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್ಗಳ ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಿ, ಮೊಬೈಲ್ ದೋಚಿ ಪರಾರಿಯಾಗುತ್ತಿದ್ದರು. ಕಳೆದ ಸೆ.13ರಂದು ರಾತ್ರಿ 11.30ರ ಸುಮಾರಿಗೆ ಕಸವನಹಳ್ಳಿ ರಸ್ತೆ ಮಾರ್ಗದಲ್ಲಿ ಫುಡ್ ಡೆಲಿವರಿಗೆ ಹೋಗುತ್ತಿದ್ದ ಸುರೇಶ್ ಅವರ ಬೈಕ್ ಅಡ್ಡಿಗಟ್ಟಿ ಆರು ಮಂದಿ ದರೋಡೆಕೋರರು ಹಲ್ಲೆ ಮಾಡಿ, ಮೊಬೈಲ್ ಕಸಿದು ಪರಾರಿಯಾಗಿದ್ದರು.
ಈ ಸಂಬಂಧ ಸುರೇಶ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಆರೋಪಿತ ದರೋಡೆಕೋರರು ಬೆಳ್ಳಂದೂರು, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೆಪಾಳ್ಯ, ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 9 ಮೊಬೈಲ್ಗಳನ್ನ ದೋಚಿದ್ದರು. ಕದ್ದ ಫೋನ್ಗಳನ್ನ ಆರೋಪಿಗಳೇ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ಧಾರೆ.

