ಚಂದ್ರವಳ್ಳಿ ನ್ಯೂಸ್, ರಾಯಚೂರು :
ಖೋಟಾ ನೋಟು ಜಾಲವನ್ನು ಪೊಲೀಸರು ಭೇದಿಸಿದ್ದು ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೇಬಲ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಖೋಟಾ ನೋಟ್ ಜಾಲದಲ್ಲಿ ಸಿಲುಕಿಕೊಂಡಿರುವ ಆರೋಪಿಗಳಾದ ಸದ್ದಾಂ ಅಲಿಯಾಸ್ ಮೊಹಮ್ಮದ್ ಯಾಸಿನ್, ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ಮರಿಲಿಂಗ, ರಮೇಶ್ ಆದಿ ಹಾಗೂ ಶಿವಲಿಂಗ ಎನ್ನುವ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರಿನ ಶಾಂತಿ ಕಾಲೋನಿಯ ಬಾಡಿಗೆ ಮನೆಯಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದರಲ್ಲದೆ ಬೇರೆ ಕಡೆಯಿಂದ ಖೋಟಾ ನೋಟ್ ತರಿಸಿಕೊಂಡು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಅಂಶ ಬಯಲಾಗಿದೆ.
ಮಾರುಕಟ್ಟೆಯಲ್ಲಿ ನಕಲಿ ನೋಟು ಚಲಾವಣೆ ಮಾಡಿ ಜನರಿಗೆ ಮೋಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಬಾಡಿಗೆ ಮನೆಯೊಂದರಲ್ಲಿ ಪತ್ತೆಯಾದ ಖೋಟಾ ನೋಟು ತಯಾರಿಕೆಗೆ ಬಳಸುತ್ತಿದ್ದ ಬಿಳಿ ಪೇಪರ್ ಸೇರಿ ಕಚ್ಚಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.
ಖೋಟಾ ನೋಟು ಪ್ರಕರಣ ಸಂಬಂಧ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಕಿಂಗ್ ಪಿನ್ ಹೈದರಾಬಾದ್ ವ್ಯಕ್ತಿಯ ಸೂಚನೆ ಮೇರೆಗೆ ಆರೋಪಿಗಳು ರಾಯಚೂರಿನಲ್ಲಿ ಖೋಟಾ ನೋಟು ತಯಾರಿಕೆ ಮಾಡುತ್ತಿದ್ದರಲ್ಲದೆ ಮಾರಾಟ ಕೂಡಾ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.