ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳ ಹೆಸರಿನಲ್ಲಿ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ)ಗೆ ವಂಚಿಸಲು ಯತ್ನಿಸಿರುವ ಘಟನೆ ವರದಿಯಾಗಿದೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಓರ್ವರು ನೀಡಿರುವ ದೂರಿನನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಯತ್ನಿಸಿದ್ದ ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಳೆದ ಅಕ್ಟೋಬರ್-3ರಂದು ರಾಜರಾಜೇಶ್ವರಿ ನಗರದ ಸರೋವರ ವಲಯದ ಪಾಲಿಕೆಯ ಎಇಇ ವೆಂಕಟೇಶ್ ಅವರ ಫೋನ್‌ಗೆ ಬಂದ ಕರೆಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಮಿಸ್ಡ್ ಕಾಲ್ ನಂಬರ್‌ಅನ್ನು ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಲೋಕಾಯುಕ್ತ ನ್ಯಾಯಮೂರ್ತಿಗಳ ಹೆಸರಿನಲ್ಲಿರುವುದುಹಾಗೂ ಪ್ರೊಫೈಲ್‌ನಲ್ಲಿ ನ್ಯಾಯಮೂರ್ತಿಗಳ ಫೋಟೋ ಇರಿಸಿರುವುದು ಕಂಡುಬಂದಿದೆ.
ನಂತರವೂ ಒಂದೆರೆಡು ಬಾರಿ ಅದೇ ನಂಬರ್‌ನಿಂದ ಕರೆಗಳು ಬಂದಾಗ ಅನುಮಾನಗೊಂಡ ವೆಂಕಟೇಶ್ ಅವರು ಲೋಕಾಯುಕ್ತ ಕಚೇರಿಗೆ ಬಂದು ಪರಿಶೀಲಿಸಿದಾಗ ಅದು ನಕಲಿ ನಂಬರ್ ಎಂಬುದು ಖಚಿತವಾಗಿದೆ. ಕೂಡಲೇ ವೆಂಕಟೇಶ್, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಶ್ರೀನಿವಾಸ್ ದೊಡ್ಡಮನಿ ಅವರು ನಕಲಿ ನಂಬರ್ ಬಳಸಿರುವ ವಂಚಕನ ವಿರುದ್ಧ ವಿಧಾನಸೌಧ ಠಾಣೆಗೆ ದೂರು ಸೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

