ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬೇರೊಬ್ಬರ ಸಹಿ ಫೋರ್ಜರಿ ಮಾಡುವುದು ಗಂಭೀರ ಅಪರಾಧ ಮತ್ತು ವಂಚನೆ ಆಗಲಿರುವುದನ್ನು ಗಂಭೀರವಾಗಿ ಪರಿಗಣಿಸದ ವಂಚಕರು ಭೂ ಪರಿವರ್ತನೆಗಾಗಿ ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿಯನ್ನೇ ಫೋರ್ಜರಿ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ರೈತರು ಪಡೆದ ಸಾಲದ ಹಣ ಡ್ರಾ ಮಾಡಲು ವಂಚಕರು ನಕಲಿ ಸಹಿ ಮಾಡಿರುವುದನ್ನು ಕೇಳಿದ್ದೇವೆ. ಪಾಲುದಾರಿಕೆಯಿಂದ ಆರಂಭಿಸುವ ಕಾರ್ಖಾನೆಗಳು, ಸಣ್ಣ ಕೈಗಾರಿಕೆ, ಬೃಹತ್ ಕೈಗಾರಿಕೆಗಳು ಸೇರಿದಂತೆ ಎಲ್ಲ ರೀತಿಯ ಆರ್ಥಿಕ ವಹಿವಾಟು ನಡೆಯುವ ಆಸ್ತಿ ಮತ್ತು ಸ್ವತ್ತುಗಳನ್ನು ಕಬಳಿಸಿ ದಿಢೀರ್ ಶ್ರೀಮಂತರಾಗಲು ವಂಚಕರು ಫೋರ್ಜರಿ ಸಹಿ ಮಾಡುವುದನ್ನು ನೋಡಿದ್ದೇವೆ.
ಹಣದ ದುರಾಸೆಗಾಗಿ ಸರ್ಕಾರಿ ಮೇಲಾಧಿಕಾರಿಗಳ ಸಹಿಯನ್ನು ಅಧೀನಾಧಿಕಾರಿಗಳು ಫೋರ್ಜರಿ(ನಕಲಿ) ಮಾಡಿ ಜೈಲು ಕಂಬಿ ಎಣಿಸುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಮಾಡಲಾಗಿದ್ದ ಭೂ ಪರಿವರ್ತನೆಯನ್ನು ವಾಸದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿದ್ದು ಕಲಂ-9ರಲ್ಲಿ ವಿಸ್ತೀರ್ಣ ನಮೂದು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳ ಸಹಿಯನ್ನೇ ಫೋರ್ಜರಿ ಮಾಡಿದ್ದು ಪೊಲೀಸರು ಈಗ ಎಫ್ಐಆರ್ ದಾಖಲು ಮಾಡಿದ್ದು ಕಂಬಿ ಎಣಿಸುವ ದಿನಗಳು ದೂರವಿಲ್ಲ.
ಜಿಲ್ಲಾಧಿಕಾರಿ ಸಹಿ ಫೋರ್ಜರಿ (ನಕಲಿ ಸಹಿ) ಮಾಡುವುದು ಒಂದು ಗಂಭೀರ ಅಪರಾಧ ಮತ್ತು ವಂಚನೆಯಾಗಿದ್ದು, ಇದರಲ್ಲಿ ಹಣದ ದುರುಪಯೋಗ, ನಕಲಿ ದಾಖಲೆಗಳ ಸೃಷ್ಟಿ ಮತ್ತು ಮೋಸ ಮಾಡುವ ಉದ್ದೇಶ ಇದ್ದು ಜಿಲ್ಲಾಧಿಕಾರಿ ಸಹಿ ನಕಲು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿರಿಯೂರು ಗ್ರಾಮದ ರಿಸನಂ80/2ಎ1 ಜಮೀನಿನಲ್ಲಿ 0.33 ಗುಂಟೆ, ಮತ್ತು 80/2ಎ–2 ಜಮೀನಿನಲ್ಲಿ 0.33 ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶದಿಂದ ವಾಸದ ಉದ್ದೇಶಕ್ಕಾಗಿ ಭೂ ಪರಿವರ್ತನೆಯನ್ನು ಮಾಡಲಾಗಿದ್ದು ಕಲಂ-9ರಲ್ಲಿ ಜಮೀನಿನ ವಿಸ್ತೀರ್ಣ ನಮೂದು ಮಾಡುವಂತೆ ಹಿರಿಯೂರು ನಗರದ ಆರ್.ಅನಿಲ್ ಕುಮಾರ್ ಬಿನ್ ರಾಮಚಂದ್ರಶೆಟ್ಟಿ ಇವರು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಸಹಿಯನ್ನು ಫೋರ್ಜರಿ ಮಾಡಿರುವುದು ಪ್ರಕರಣ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲಾಧಿಕಾರಿ ಡಿಜಿಟಲ್ ಸಿಗ್ನೇಚರ್ ಪೊರ್ಜರಿ ಸಹಿ ಮಾಡಿ ಭೂ ಪರಿವರ್ತನೆ ಆದೇಶ ಪ್ರತಿ ಸೃಷ್ಠಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಫೋರ್ಜರಿ ಸಹಿ ಮಾಡಿ ನಕಲಿ ದಾಖಲೆ ಸೃಷ್ಠಿಸಿದವರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಹಿರಿಯೂರು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.
ಹಿರಿಯೂರು ತಾಲೂಕು, ಕಸಬಾ ಹೋಬಳಿಯ ಹಿರಿಯೂರು ಗ್ರಾಮದ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಎಂ.ಎನ್.ಸ್ವಾಮಿ ಬಿನ್ ಮಾರಪ್ಪ ಇವರು ದಿನಾಂಕ-18-11-2025 ರಂದು ಹಿರಿಯೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರು ಆಧರಿಸಿ ಪೊಲೀಸರು ಹಿರಿಯೂರು ನಗರದ ಆರ್.ಅನಿಲ್ ಕುಮಾರ್ ಬಿನ್ ರಾಮಚಂದ್ರಶೆಟ್ಟಿ ಇವರ ವಿರುದ್ಧ ಬಿಎನ್ಎಸ್– 336(2),336(3) ಹಾಗೂ 420(2) ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.
ಸದರಿ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಕೆಳ ಹಂತದ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಇದ್ದು ಸಮಗ್ರ ತನಿಖೆ ಮಾಡಿದಾಗ ಎಲ್ಲ ಕಳ್ಳರು ಬಯಲಿಗೆ ಬರಲಿದ್ದಾರೆ.
ಕಾನೂನು ಕ್ರಮ: ಸಹಿ ಫೋರ್ಜರಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ವಂಚನೆ (ಸೆಕ್ಷನ್-420), ನಕಲು ಮಾಡುವುದು (ಫೋರ್ಜರಿ ಸೆಕ್ಷನ್– 463) ಮತ್ತು ನಕಲಿ ದಾಖಲೆಗಳನ್ನು ಬಳಸುವುದು (Using forged documents – Section 471) ಮುಂತಾದ ಅಪರಾಧಗಳ ಅಡಿಯಲ್ಲಿ ಬರಲಿದ್ದು ಮತ್ತು ಶಿಕ್ಷಾರ್ಹ ಅಪರಾಧವಾಗಿದೆ.
ಇದು ಕೇವಲ ಹಣಕಾಸಿನ ವಂಚನೆಯಲ್ಲ, ಜಿಲ್ಲಾಡಳಿತದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಸಹಿಯನ್ನು ನಕಲು ಮಾಡಿ ದುರುಪಯೋಗಪಡಿಸಿಕೊಳ್ಳುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ದೂರು ನೀಡುವುದು ಮುಖ್ಯವಾಗಿದೆ.
“ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿಯನ್ನ ಫೋರ್ಜರಿ ಮಾಡಿ ಭೂ ಪರಿವರ್ತನೆ ಮಾಡಿರುವುದು ಹಿರಿಯೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ತನಿಖೆಯನ್ನೂ ಮಾಡಿದ್ದು ಡಿಜಿಟಲ್ ಭೂ ಪರಿವರ್ತನೆಯ ಪ್ರತಿಯನ್ನು ನೀಡುವ ಸಂದರ್ಭದಲ್ಲಿ ಈ ಪಕರಣ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಹಾಕದೇ ತಾಲೂಕು ಕಚೇರಿ ಮತ್ತು ಎಸಿ ಕಚೇರಿ ಹಂತದಲ್ಲಿ ಡಿಜಿಟಲ್ ಸಹಿ ಫೋರ್ಜರಿ ಮಾಡಲಾಗಿದೆ.
ಖಾತೆ ಮಾಡುವ ಹಂತದಲ್ಲಿ ಈಕೃತ್ಯ ಮಾಡಲಾಗಿದೆ. ಒಮ್ಮೆ ಖಾತೆ ಎಂಟ್ರಿ ಆದ ಮೇಲೆ ಭೂಮಿಗೆ ಪಹಣಿ ಇರುವುದಿಲ್ಲ. ಆದರೂ ಪಹಣಿ ಇದೆ ಎಂದು ದಾಖಲೆ ಸೃಷ್ಠಿಸಿ ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ ಪಡೆದು ಭೂ ಪರಿವರ್ತನೆ ಆಗಿದೆ ಎಂದು ಆದೇಶ ನೀಡಲಾಗಿದೆ. ಈಗಾಗಲೇ ಈ ಎರಡು ಕಡತಗಳನ್ನು ಸೀಜ್ ಮಾಡಲಾಗಿದ್ದು ಎಫ್ಐಆರ್ ಕೂಡ ದಾಖಲು ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಕಚೇರಿಗೆ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿಲ್ಲ, ಆದರೂ ಭೂ ಪರಿವರ್ತನೆಯ ಪ್ರತಿ ಅವರಲ್ಲಿದೆ.
ಈ ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು ಸೂಕ್ತ ತನಿಖೆ ಮಾಡಲಾಗುತ್ತಿದ್ದು ಕಾನೂನು ಕ್ರಮಕೈಗೊಳ್ಳಲಾಗುತ್ತದೆ ”.
ಟಿ.ವೆಂಕಟೇಶ್, ಜಿಲ್ಲಾಧಿಕಾರಿಗಳು, ಚಿತ್ರದುರ್ಗ.

