ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ಇಲಾಖೆಯನ್ನು ದುಃಸ್ಥಿತಿಗೆ ತಳ್ಳಿ ಬಸ್ ಟಿಕೆಟ್ ದರ ಶೇ.15 ಜಾಸ್ತಿ ಮಾಡುವುದರ ಮೂಲಕ ‘ಮಹಿಳೆಯರಿಗೆ ಉಚಿತ, ಪುರುಷರಿಗೆ ಅದರ ಹೊರೆ ಖಚಿತ‘ ಎನ್ನುವ ರೀತಿಯಲ್ಲಿ ರಾಜ್ಯ ಸರ್ಕಾರ ಬರೆ ಎಳೆಯುವ ಕೆಲಸ ಮಾಡಿದೆ. ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ದುಪ್ಪಟ್ಟು ಕಿತ್ತುಕೊಳ್ಳುವುದೇ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತರಾಟೆ ತೆಗೆದುಕೊಂಡಿದ್ದಾರೆ.
ಗ್ಯಾರಂಟಿಗಳಿಂದ ಹಿಮಾಚಲ ಪ್ರದೇಶ ಆರ್ಥಿಕ ಬಿಕ್ಕಟಿಗೆ ಸಿಲುಕಿದೆ. ರಾಜ್ಯದಲ್ಲೂ ಗ್ಯಾರಂಟಿಗಳಿಗೆ ಹಣವನ್ನು ಕ್ರೋಢೀಕರಣಗೊಳಿಸಲು ಸಾಧ್ಯವಾಗದೆ ಬಡವರು, ರೈತರ ಮೇಲೆ ಬರೆ ಎಳೆಯುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಈ ಕೊಡಲೇ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.
ಪರ ರಾಜ್ಯಗಳ ಚುನಾವಣೆ ಖರ್ಚಿಗಾಗಿ ಕನ್ನಡಿಗರ ಜೇಬಿಗೆ ಕನ್ನ ಹಾಕುವ ಸಂಪ್ರದಾಯವನ್ನು ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದುವರೆಸಿದೆ!!. ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ಸುಳ್ಳು ಹೇಳಿ ಈಗ ಏಕಾಏಕಿ ಬಸ್‌ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿರುವುದು ಸಹ ಮುಂಬರುವ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಾರ್ಟಿ ಫಂಡ್‌ಗೆ!! ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೆ, ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರಿಗೆ ಇನ್ನೆಷ್ಟು ತೊಂದರೆ ನೀಡುವಿರಿ..??!! ಎಂದು ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದ್ದಾರೆ.