ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಸತಿ ರಹಿತರು, ನಿರಾಶ್ರಿತರು ಆಹಾರವಿಲ್ಲದೆ ನರಳಬಾರದೆಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ವಸತಿ ರಹಿತರು ಪ್ರಯೋಜನ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತೆ ಲಕ್ಷ್ಮಿ ತಿಳಿಸಿದರು.
ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ನಗರಸಭೆ, ಗಾಡ್ಸ್ ಸಂಸ್ಥೆ ವತಿಯಿಂದ ಮುನ್ಸಿಪಲ್ ಕಾಂಪ್ಲೆಕ್ಸ್‌ನಲ್ಲಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ವಿಶ್ವ ವಸತಿ ರಹಿತರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಗರ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಬರುವವರಿಗೆ ಗಾಡ್ಸ್ ಸಂಸ್ಥೆ ಆಶ್ರಯ ನೀಡುತ್ತ ಯಾವುದೇ ತೊಂದರೆಯಿಲ್ಲದೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಸರ್ಕಾರದ ಜೊತೆ ಎನ್.ಜಿ.ಓ. ವಿವಿಧ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಬೇಕು. ಹಿರಿಯರನ್ನು ಕೆಲವು ಮನೆಗಳಲ್ಲಿ ಸರಿಯಾಗಿ ಜೋಪಾನ ಮಾಡದ ಕಾರಣ ನಿರಾಶ್ರಿತರು ಇಂತಹ ಕೇಂದ್ರಗಳಿಗೆ ಬರುವುದು ಸಹಜ. ಇನ್ನು ಹಲವರು ಕೆಲಸದ ನಿಮಿತ್ತ ನಗರ ಪ್ರದೇಶಗಳಿಗೆ ಬಂದಾಗ ರಾತ್ರಿ ವೇಳೆ ತಂಗಲು ಜಾಗವಿಲ್ಲದಂತಾಗಿ ಇಲ್ಲಿಗೆ ಬರುತ್ತಾರೆ. ಸರ್ಕಾರ ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಿದೆ. ವಸತಿ ರಹಿತರಿಗೆ ಅದು ಉಪಯೋಗವಾಗಬೇಕೆಂದು ಹೇಳಿದರು.
ಕೌಶಲ್ಯಾಭಿವೃದ್ದಿ ಅಧಿಕಾರಿ ವೇಮಣ್ಣ ಮಾತನಾಡಿ ವಸತಿ ರಹಿತರಿಗೆ ಆಶ್ರಯ ಕೇಂದ್ರದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಗಾಡ್ಸ್ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬಸ್‌ನಿಲ್ದಾಣ, ಆಸ್ಪತ್ರೆ ಇನ್ನು ಮುಂತಾದ ಕಡೆ ನಿರಾಶ್ರಿತರನ್ನು ಪತ್ತೆ ಹಚ್ಚುವುದಕ್ಕಾಗಿ ರ್‍ಯಾಪಿಡ್ ಸರ್ವೆ ನಡೆಸಲಾಗುತ್ತಿದೆ ಎಂದರು.
ಗಾಡ್ಸ್ ಸಂಸ್ಥೆ ಕಾರ್ಯದರ್ಶಿ ಸೂರ್ಯನಾರಾಯಣ, ಕೆಂಚಪ್ಪ, ಉಮೇಶ್, ಚಿದಾನಂದಮೂರ್ತಿ, ಡಾ.ಪವಿತ್ರ, ನ್ಯಾಯವಾದಿ ಮಾದವಿಲತ, ಕವಿತ, ಹತೀಕ್, ನಗರಸಭೆ ಪರಿಸರ ಇಂಜಿನಿಯರ್ ಜಾಫರ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಸಿ ನೆಡಲಾಯಿತು.

