ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಷ್ಟ್ರ ರಾಜಧಾನಿ, ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಹಿರಿಯ ನಾಗರಿಕರಿಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
ದೆಹಲಿ ಮಾಜಿ ಸಿಎಂ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿಯ ಎಲ್ಲ ಹಿರಿಯ ನಾಗರಿಕರಿಗೆ ಎಲ್ಲ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಬುಧವಾರ ಘೋಷಣೆ ಮಾಡಿದ್ದಾರೆ.
ದೆಹಲಿ ವಿಧಾನಸಭೆಗೆ ಮುಂದಿನ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು ಈಗಿನಿಂದಲೇ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಸಿದ್ಧತೆ ನಡೆಸಿದೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಘೋಷಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಉಳಿಸಿಕೊಂಡ ನಂತರ ಸಂಜೀವಿನಿ ಯೋಜನೆ ಭಾಗವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈಗ ನಿಮ್ಮನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನೀವು ದೇಶವನ್ನು ಮುನ್ನಡೆಸಲು ಶ್ರಮಿಸಿದ್ದೀರಿ. ಚಿಕಿತ್ಸೆಯ ವೆಚ್ಚದ ಮೇಲೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಇದಕ್ಕಾಗಿ ನೋಂದಣಿ ಒಂದು ಅಥವಾ ಎರಡು ದಿನಗಳಲ್ಲಿ ಪ್ರಾರಂಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನೋಂದಣಿಗಾಗಿ ಎಎಪಿ ಕಾರ್ಯಕರ್ತರು ನಿಮ್ಮ ಮನೆಗೆ ಬರುತ್ತಾರೆ. ಅವರು ನಿಮಗೆ ಕಾರ್ಡ್ ನೀಡುತ್ತಾರೆ. ಅದನ್ನು ಸುರಕ್ಷಿತವಾಗಿಡುತ್ತಾರೆ. ಚುನಾವಣೆಯ ನಂತರ ನಾವು ಅಧಿಕಾರಕ್ಕೆ ಬಂದ ನಂತರ ಈ ನೀತಿ ಜಾರಿಗೆ ತರಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದರು.
ಸಂಜೀವಿನಿ ಯೋಜನೆಯಡಿಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.