ಆಕರ್ಷಣೀಯವಾಗಿದ್ದ ಹಳೆ ವಿದ್ಯಾರ್ಥಿಗಳ ಸ್ನೇಹ-ಸಮ್ಮಿಲನ

News Desk

 ನಲವತ್ತು ತುಂಬಿದ ತಗಡೂರು ಶಾಲೆಯಲ್ಲಿ ಸಂಭ್ರಮ ಸಡಗರ
ಆಕರ್ಷಣೀಯವಾಗಿದ್ದ ಹಳೆ ವಿದ್ಯಾರ್ಥಿಗಳ ಸ್ನೇಹ-ಸಮ್ಮಿಲನ
ಶಿಕ್ಷಣದಿಂದ ಸಾಮಾಜಿಕ ಬದಲಾವಣೆ: ಅಶ್ವತ್ ನಾರಾಯಣಗೌಡ
ಚಂದ್ರವಳ್ಳಿ ನ್ಯೂಸ್, ತಗಡೂರು, (ಚನ್ನರಾಯಪಟ್ಟಣ ತಾಲೂಕು):
ನಲವತ್ತು ವರ್ಷಗಳ ಕಾಲ ಆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರಿ, ತಮಗೆ ಪಾಠ ಕಲಿಸಿದ ಶಿಕ್ಷಕರನ್ನು ಪುಷ್ಪವೃಷ್ಠಿ ಮಾಡಿ ವೇದಿಕೆಗೆ ಸ್ವಾಗತಿಸಿ ಆತ್ಮೀಯವಾಗಿ ಸನ್ಮಾನಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು.

ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ತಗಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಬಳಗದ ವತಿಯಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ವಿಭಿನ್ನವಾಗಿ ಮೂಡಿ ಬಂದಿದ್ದಲ್ಲದೆ, ಜನಮನ ಸೆಳೆಯಿತು.

- Advertisement - 

ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿದ  ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಧೀಶರಾದ ಕೆ.ಎಚ್.ಅಶ್ವತ್ಥ ನಾರಾಯಣಗೌಡ ಅವರು, ನಾನೂ ಒಬ್ಬ ಉಪಾಧ್ಯಾಯನ ಮಗನಾಗಿ ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ನೀವು ಕೂಡ ನಿಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಗುರುವಿನ ಕೃಪೆ ಮುಖ್ಯವಾಗಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಎಲ್ಲ ವರ್ಗಗಳಲ್ಲೂ ಬದಲಾವಣೆ ತರಲು ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಪಾಲಕರು ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಬೇಕೆಂದು ಸಲಹೆ ನೀಡಿದರು.

ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ನೆಚ್ಚಿನ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುವ ಸಲುವಾಗಿ ಕಾರ್ಯ ಕ್ರಮವನ್ನು ಆಯೋಜಿಸಿರುವ ಕಾರಣ ಹಳೆಯ ವಿದ್ಯಾ ರ್ಥಿಗಳಿಗೆ ಶಿಕ್ಷಣದ ಮೌಲ್ಯ ತಿಳಿದಿದೆ. ಆ ಕಾರಣದಿಂದಲೇ ತನ್ನ ನೆಚ್ಚಿನ ಶಿಕ್ಷಕರಿಗೆ ಗುರು ವಂದನೆ ಸಲ್ಲಿಸುವ ಮೂಲಕ ಗುರು ಶಿಷ್ಯರ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಕಾರ್ಯಕ್ರಮದ ಮೂಲಕ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement - 

40 ಶಾಲೆ ಉಳಿಸಲು ಕ್ರಮ:
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಮುಚ್ಚುವುದನ್ನು ತಡೆಯಬಹುದು ಎಂದರು.
ತಾಲೂಕಿನಲ್ಲಿ ಸುಮಾರು 40 ಪ್ರೌಢಶಾಲೆಗಳಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದ ದಾಖಲಾತಿ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಇದು ಒಬ್ಬರಿಂದ ಆಗುವ ಕೆಲಸವಲ್ಲ. ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು.

ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನಲವತ್ತು ವರ್ಷಗಳ ಹಿಂದೆ ಕಷ್ಟದ ದಿನದಲ್ಲಿ ಈ ಶಾಲೆಯಲ್ಲಿ ಓದಿದ ದಿನಗಳನ್ನು ನೆನಪಿಸಿಕೊಂಡಿದ್ದಲ್ಲದೆ, ಆಗಿನ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು ಎಂದರು.

ಶಿಕ್ಷಣದಿಂದ ಜ್ಞಾನವನ್ನು ಪಡೆದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಈ ಹಿಂದೆ ಶಿಕ್ಷಣ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳ ಕೊರತೆ ಇತ್ತು. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಶಿಕ್ಷಣವೂ ಈಗ ವ್ಯಾಪಾರೀಕರಣವಾಗಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಸರ್ಕಾರ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ ಎಂದರು.

5 ಲಕ್ಷ ರೂ ನೆರವು:
ವಿಧಾನ ಪರಿಷತ್ ಸದಸ್ಯರಾದ ಡಾ.ಸೂರಜ್ ರೇವಣ್ಣ ಮಾತನಾಡಿ, ತಗಡೂರು ಪ್ರೌಢಶಾಲೆ ಅಭಿವೃದ್ಧಿಗೆ 5 ಲಕ್ಷ ರೂ ಅನುದಾನ ನೀಡುವುದಾಗಿ ಷೋಷಣೆ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ.ಗೋಪಾಲಸ್ವಾಮಿ ಮಾತನಾಡಿ, ತಗಡೂರು ಸ್ಕೂಲ್ ಮತ್ತು ಗ್ರಾಮದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಲರಾಮ್ ಮಾತನಾಡಿ, ತಗಡೂರು ಶಾಲೆ ವಿಶೇಷವಾಗಿ ನನ್ನ ಗಮನ ಸೆಳೆದಿದೆ. ಇಲ್ಲಿರುವ ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು.

ಶಿಕ್ಷಕರುಗಳಿಗೆ ಸನ್ಮಾನ:
ಶಿಕ್ಷಕರಾದ ಟಿ.ಎಸ್.ಶ್ರೀನಿವಾಸರಾವ್, ಪರಶುರಾಮ್, ಚಂದ್ರಶೇಖರ ಕೋರೆ, ಟಿ.ಡಿ.ತಿಮ್ಮಯ್ಯ, ಕೆ.ಶಿವಮೂರ್ತಿ, ಸಿ.ಎಚ್.ರವಿಕುಮಾರ್, ಸೋಮಶೇಖರ್, ವಿ.ರಂಗಸ್ವಾಮಿ, ಕೆ.ಟಿ.ಆನಂದ್, ಎಚ್.ಎಂ.ಕುಮಾರಸ್ವಾಮಿ, ಪಂಚಾಕ್ಷರಯ್ಯ, ನರಸಿಂಹ, ಶಿವೇಗೌಡ, ಕೆಂಪಯ್ಯ, ಕುಮಾರಸ್ವಾಮಿ, ನೇತ್ರಮ್ಮ, ನಂದೀಶಪ್ಪ, ಬಸವರಾಜ್, ಗಣೇಶಪ್ಪ, ಕೃಷ್ಣಪ್ಪ ಮತ್ತಿತರರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲೆಗೆ ಭೂ ದಾನ ಮಾಡಿದ ಚನ್ನವೀರೇಗೌಡ ಮತ್ತು ರುದ್ರಪ್ಪ ಕುಟುಂಬದವರನ್ನು ಗೌರವಿಸಲಾಯಿತು.

ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ದೀಪ, ಗ್ರಾಪಂ ಅಧ್ಯಕ್ಷ ಹೇಮರಾಜ್, ಗ್ರಾ.ಪಂ.ಸದಸ್ಯ ಭಾರತೀಶ್, ಉದ್ಯಮಿ ಅಣತಿ ಯೋಗೇಶ್, ಓಬಳಾಪುರ ಬಸವರಾಜ್, ಉದ್ಯಮಿ ರಾಜೇಗೌಡ, ಮುಖ್ಯ ಶಿಕ್ಷಕಿ ಜಯಮ್ಮ, ನಿವೃತ್ತ ಉಪನ್ಯಾಸಕ ಪಂಡಿತ್ ವೀರಭದ್ರಪ್ಪ, ಟಿ.ಡಿ.ಸೋಮಶೇಖರ್, ಅಶೋಕ್, ಚೆನ್ನವಿರೇಗೌಡ, ಪ್ರವೀಣ್ ಕುಮಾರ್, ಗಿರೀಶ್, ರಂಗಸ್ವಾಮಿ ಮತ್ತಿತರರು ಇದ್ದರು.

Share This Article
error: Content is protected !!
";