ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಡಿ.9ರಿಂದ ಆರಂಭವಾಗಲಿದ್ದು ಆಡಳಿತ ರೂಢ ಕಾಂಗ್ರೆಸ್ ಸರ್ಕಾರಕ್ಕೆ ಚುಚ್ಚಲು ಮುಡಾ, ವಾಲ್ಮೀಕಿ, ವಕ್ಫ್, ಬಾಣಂತಿಯರ ಸಾವು, ಅಧಿಕಾರಿಗಳ ಆತ್ಮಹತ್ಯೆ, ಬಿಪಿಎಲ್ ಕಾರ್ಡ್ ರದ್ದು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕಾಯ್ದೆ ತಿದ್ದುಪಡಿ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ವಿವಾದ, ಗ್ಯಾರಂಟಿ ಯೋಜನೆಯ ಲೋಪ, ಸುಪ್ರೀಂ ಕೋರ್ಟ್ ಆದೇಶದ ನಂತರವೂ ಒಳ ಮೀಸಲಾತಿ ಜಾರಿ ವಿಳಂಬ, ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೇ ತಾರತಮ್ಯ ಮಾಡುತ್ತಿರುವುದು, ಅಭಿವೃದ್ಧಿ ಕಾರ್ಯ ಕುಂಠಿತ, ರಸ್ತೆ ಗುಂಡಿ ಮುಚ್ಚದಿರುವುದು ಹೀಗೆ ಸರ್ಕಾರದ ಸಾಲು ಸಾಲು ಲೋಪಗಳು ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಆಡಳಿತ ರೂಢ ಕಾಂಗ್ರೆಸ್ ಸರ್ಕಾರವೇ ವಿರೋಧ ಪಕ್ಷಗಳಿಗೆ ನೀಡಿದೆ.
ಇಂದಿನಿಂದ 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಅಧಿವೇಶನ ಸಾಕ್ಷಿಯಾಗಲಿದೆ. ಚಳಿಗಾಲದ ಅಧಿವೇಶನಕ್ಕೆ ಸುವರ್ಣ ಸೌಧವೂ ಸಿದ್ದವಾಗಿದ್ದು ಸ್ಪೀಕರ್ ಯುಟಿ ಖಾದರ್ ಅಧಿವೇಶನ ಮುನ್ನಡೆಸಲಿದ್ದಾರೆ.
ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ, ಸ್ನೇಹಿತ ಪಕ್ಷ ಜೆಡಿಎಸ್ ಪಕ್ಷಗಳು ಜಂಟಿಯಾಗಿ ಹಲವು ಅಸ್ತ್ರಗಳನ್ನ ಪರಿಣಾಮಕಾರಿಯಾಗಿ ಬಳಸಿಕೊಂಡು ಕಾಂಗ್ರೆಸ್ ಮೇಲೆ ಮುಗಿಬೀಳಲು ಸಜ್ಜಾಗಿವೆ.
ಸರ್ಕಾರದ ವಿರುದ್ದ ಸಮರ ಸಾರಲು ವಿಪಕ್ಷಗಳಿಗೆ ಸಾಲು ಸಾಲು ಅಸ್ತ್ರಗಳಿದ್ದು, ಆ ಎಲ್ಲ ಅಸ್ತ್ರಗಳನ್ನ ಎದುರಿಸಲು ಸರ್ಕಾರದ ಬಳಿಯೂ ಬ್ರಹ್ಮಾಸ್ತ್ರಗಳು ರೆಡಿಯಾಗಿವೆ. ಆಡಳಿತ ರೂಢ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕೂರುತ್ತಿಲ್ಲ. ಬದಲಿಗೆ ಗ್ಯಾರಂಟಿ ಯೋಜನೆಗಳ ಯಶಸ್ಸು, ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು, ವಿಪಕ್ಷಗಳಲ್ಲಿನ ಒಡಕು, ಬಿಜೆಪಿ ಯತ್ನಾಳ್ ಬಣದ ಹೋರಾಟ, ಜೆಡಿಎಸ್ ಪಕ್ಷದ ಹಿರಿಯ ಶಾಸಕ ಜಿ.ಟಿ.ದೇವೇಗೌಡರ ಅಸಮಾಧಾನಗಳನ್ನ ಕಾಂಗ್ರೆಸ್ ಗುರಾಣಿಯಂತೆ ಪ್ರತ್ಯಸ್ತ್ರ ಮಾಡಿ ವಿಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ಮಾಡಲಿದೆ.
ಯಡಿಯೂರಪ್ಪ ಅವಧಿಯಲ್ಲಿ ನಡೆದಿರುವ ಕೋವಿಡ್ ಅಕ್ರಮ ಕುರಿತು ನಿವೃತ್ತ ನ್ಯಾ. ಡಿ ಕುನ್ಹಾ ವರದಿ ಇಟ್ಟುಕೊಂಡು ಬಿಜೆಪಿಗೆ ತಿರುಗೇಟು ನೀಡಲು ಸರ್ಕಾರ ರೆಡಿಯಾಗಿದೆ. ಬಿಜೆಪಿ ಅವಧಿಯಲ್ಲಿನ ಬಿಡಿಎ ಹಗರಣ, ಗಣಿ ಹಗರಣಗಳು, ಬಿಜೆಪಿಯಲ್ಲಿ ವಿಜಯೇಂದ್ರ-ಯತ್ನಾಳ್ ಕಿತ್ತಾಟ, ಕೇಂದ್ರ ಸರ್ಕಾರದ ಅನುದಾನ ತಾರತಮ್ಯ, ಉಪ ಚುನಾವಣೆ ಸೋಲು ಸೇರಿ ಹಲವು ವಿಷಯಗಳನ್ನ ಇಟ್ಟುಕೊಂಡು ವಿಪಕ್ಷಗಳನ್ನ ಕಟ್ಟಿ ಹಾಕುವ ರಣತಂತ್ರವನ್ನ ಕಾಂಗ್ರೆಸ್ ಮಾಡಿದೆ. ಸದನದಲ್ಲಿ ವಿಪಕ್ಷಗಳನ್ನ ಕಟ್ಟಿ ಹಾಕಲು ಸಚಿವರಿಗೆ ಟಾಸ್ಕ್ ನೀಡಿರೋಸಿಎಂ, ಯಾರ ಪ್ರಶ್ನೆಗೆ ಯಾರು ಉತ್ತರ ನೀಡಬೇಕು ಅಂತ ಸಚಿವರನ್ನು ನಿಯೋಜನೆ ಮಾಡಲಾಗಿದೆ.
ಅಧಿವೇಶನದಲ್ಲಿ 6ಕ್ಕೂ ಹೆಚ್ಚಿನ ವಿಧೇಯಕಗಳು ಮಂಡನೆ ಆಗಲಿವೆ. ಬಿಬಿಎಂಪಿ ವಿಧೇಯಕ, ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ, ಠೇವಣಿದಾರರ ಹಿತರಕ್ಷಣೆ ಕಾಯ್ದೆ ವಿಧೇಯಕ, ಗಣಿಗಾರಿಕೆ ಸಂಬಂಧಿಸಿದ ವಿಧೇಯಕ ಸೇರಿ ಹಲವು ಮಹತ್ವದ ವಿಧೇಯಕಗಳು ಮಂಡನೆ ಆಗಲಿದೆ. ಅಲ್ಲದೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೂ ಹೆಚ್ಚು ಸಮಯ ಮೀಸಲು ಇರಲಿದ್ದು ಒಟ್ಟಾರೆ ಬೆಳಗಾವಿ ಚಳಿಗಾಲದ ಅಧಿವೇಶನ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯ ದೊಡ್ಡ ಸಮರವೇ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.