ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಏಪ್ರಿಲ್ 7 ರಂದು ಸೋಮವಾರದಿಂದ ಬಿಜೆಪಿ ಎರಡನೇ ಹಂತದ ಹೋರಾಟ ಕೈಗೆತ್ತಿಕೊಂಡಿದೆ. ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮೂಲಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಸರ್ಕಾರದ ದರ ಏರಿಕೆ ನೀತಿ, ಭ್ರಷ್ಟಾಚಾರ, ಕಮಿಷನ್, ದುರಾಡಳಿತ, ಕಾನೂನು ಅವ್ಯವಸ್ಥೆ, ಮುಸ್ಲಿಂ ಓಲೈಕೆ ಖಂಡಿಸಿ ಜನಾಕ್ರೋಶ ಯಾತ್ರೆ ನಡೆಯಲಿದೆ.
ಏಪ್ರಿಲ್ 7ರಿಂದ 10ರ ವರೆಗೆ ಮೊದಲ ಹಂತದ ಜನಾಕ್ರೋಶ ಯಾತ್ರೆಯು ಮೈಸೂರು-ಚಾಮರಾಜನಗರ-ಮಂಡ್ಯ, ಹಾಸನ-ಕೊಡಗು-ಮಂಗಳೂರು, ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯಲಿದೆ.
ಏಪ್ರಿಲ್ 13 ರಿಂದ18ರ ವರೆಗೆ ಎರಡನೇ ಹಂತದ ಜನಾಕ್ರೋಶ ಯಾತ್ರೆಯು ಶಿವಮೊಗ್ಗ-ಉತ್ತರ ಕನ್ನಡ, ಬೀದರ್-ಕಲಬುರಗಿ, ವಿಜಯಪುರ-ಬಾಗಲಕೋಟೆ, ಬೆಳಗಾವಿ-ಹುಬ್ಬಳ್ಳಿಗಳಲ್ಲಿ ನಡೆಯಲಿದೆ.
ಏಪ್ರಿಲ್ 21 ರಿಂದ 24 ಮೂರನೇ ಹಂತದ ಯಾತ್ರೆ ಯಾದಗಿರಿ-ರಾಯಚೂರು, ಬಳ್ಳಾರಿ-ವಿಜಯನಗರ, ಕೊಪ್ಪಳ-ಗದಗ, ಹಾವೇರಿ-ದಾವಣಗೆರೆ ಜಿಲ್ಲೆಗಳಲ್ಲೂ, ಏಪ್ರಿಲ್ 27 ರಿಂದ ಮೇ 3 ರವರೆಗೆ ನಾಲ್ಕನೇ ಹಂತದ ಯಾತ್ರೆ ಚಿತ್ರದುರ್ಗ-ತುಮಕೂರು, ಚಿಕ್ಕಬಳ್ಳಾಪುರ-ಕೋಲಾರ, ಬೆಂಗಳೂರು-ಬೆಂಗಳೂರು ಗ್ರಾಮಾಂತರ-ರಾಮನಗರ ಜಿಲ್ಲೆಗಳಲ್ಲಿ ನಡೆಯಲಿದೆ.
ಆತ್ಮಹತ್ಯೆಯಲ್ಲ ಕೊಲೆ: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರದ್ದು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪ ಮಾಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಆರೋಪಿಗಳಾದ ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲವೆಂದು ಕಿಡಿಕಾರಿದರು. ಅಧಿಕಾರದ ದರ್ಪದಿಂದ ಕಾಂಗ್ರೆಸ್ನವರು ಹೇಳಿಕೆ ಕೊಡುತ್ತಿದ್ದಾರೆ. ಈ ಪ್ರಕರಣದ ಹಿಂದೆ ಯಾವೆಲ್ಲ ದುಷ್ಟಶಕ್ತಿಗಳು ಇವೆ ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ತಜ್ಞರ ಜತೆ ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.