ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೂತನ ಜಿಲ್ಲಾಡಳಿತ ಭವನದ ಕಟ್ಟಡ ನಿರ್ಮಾಣ ಕಾರ್ಯವನ್ನು ಇನ್ನೂ ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ನಗರದ ಕುಂಚಿಗನಾಳ್ ಕಣಿವೆ ಬಳಿ ನಿರ್ಮಾಣವಾಗುತ್ತಿರುವ ಜಿಲ್ಲಾಡಳಿತ ಭವನದ ಕಟ್ಟಡ ಕಾಮಗಾರಿಗೆ ಭೇಟಿ ನೀಡಿ ಅವರು ಮಾತನಾಡಿದರು.
ರೂ.25 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದ ಈ ಕಟ್ಟಡಕ್ಕೆ ಈಗಾಗಲೇ ರೂ.46 ಕೋಟಿ ವೆಚ್ಚವಾಗಿದೆ. ಪ್ರಸ್ತುತ ರೂಪಿಸಿರುವ ಯೋಜನೆಯಲ್ಲಿ ಕುಡಿಯುವ ನೀರು, ಕ್ಯಾಂಟೀನ್, ಸಂಪರ್ಕ ರಸ್ತೆ, ಪಾರ್ಕಿಂಗ್, ಅಗ್ನಿನಿಯಂತ್ರಕ ವ್ಯವಸ್ಥೆ, ಕೊರೆದಿರುವ ಗುಡ್ಡಕ್ಕೆ ರಕ್ಷಣಾ ವ್ಯವಸ್ಥೆ, ಪೀಠೋಪಕರಣಗಳು, ಇಂಟಿರಿಯರ್ ಸೇರಿದಂತೆ ಇನ್ನೂ ಹಲವು ಕಾಮಗಾರಿಗಳಿಗೆ ಯೋಜನಾ ವೆಚ್ಚ ಸಿದ್ಧಪಡಿಸಿರುವುದಿಲ್ಲ. ಈ ಎಲ್ಲ ಕಾಮಗಾರಿಗಳಿಗೆ ಇನ್ನೂ ಸುಮಾರು ರೂ.15 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಭವನದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಹೆಚ್ಚುವರಿ ಅನುದಾನ ಬಿಡುಗಡೆ ಮನವಿ ಮಾಡಲಾಗುವುದು ಎಂದು ಹೇಳಿದರು.
ನೂತನ ಜಿಲ್ಲಾಡಳಿತ ಭವನದ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಹಲವು ಇಲಾಖೆಗಳು ಕಾರ್ಯನಿರ್ವಹಿಸಲಿದ್ದು, ಚಿತ್ರದುರ್ಗ ಉಪವಿಭಾಗ ಕಚೇರಿ ನಗರದೊಳಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ, ಗುತ್ತಿಗೆದಾರ ಪಾಲಾಕ್ಷಯ್ಯ ಇದ್ದರು.