ಸಾರೋಟಿನಲ್ಲಿ ಗ್ರಾಮ ದೇವತೆಗಳ ಮೆರವಣಿಗೆ-ಜಿ.ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ ೨ರಂದು ನಡೆಯಲಿರುವ ವೈಭವಯುತ ಮೆರವಣಿಗೆಯಲ್ಲಿ  ಜಂಬೂ ಸವಾರಿಯೊಂದಿಗೆ  ಸಾರೋಟಿನಲ್ಲಿ ೫೦ ಗ್ರಾಮ ದೇವತೆಗಳು ಸಾಗಲಿವೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯ, ಕಲಾ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಎರಡನೇ ಬಾರಿ ತುಮಕೂರು ದಸರಾ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.

- Advertisement - 

ದಸರಾ ಉತ್ಸವವು ಸೆಪ್ಟೆಂಬರ್ ೨೨ರಿಂದ ಅಕ್ಟೋಬರ್ ೨ರವರೆಗೆ ೧೧ ದಿನಗಳ ಕಾಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಉತ್ಸವವನ್ನು ನೋಡಲು ಸಾರ್ವಜನಿಕರಿಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತೀ ದಿನ ೨೫೦ ವಿಶೇ? ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ದಸರಾ ಪ್ರಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ ೨೨ರಂದು ಬೆಳಿಗ್ಗೆ ೯.೩೦ಗಂಟೆಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಧಾರ್ಮಿಕ ಉತ್ಸವ, ನವರಾತ್ರಿ ಉತ್ಸವ, ಧ್ವಜಾರೋಹಣ, ದುರ್ಗಾಪೂಜೆಯನ್ನು ನೆರವೇರಿಸಲಿದ್ದಾರೆ.

- Advertisement - 

ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಡಾ. ಹನುಮಂತನಾಥ ಮಹಾಸ್ವಾಮೀಜಿ, ಶಿವಯೋಗೀಶ್ವರ ಮಹಾಸ್ವಾಮೀಜಿ, ವೀರಪತ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ವೀರೇಶಾನಂದ ಸರಸ್ವತ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.   ಸಂಸದ ವಿ. ಸೋಮಣ್ಣ, ಜನಪ್ರತಿನಿಧಿ ಟಿ.ಬಿ. ಜಯಚಂದ್ರ, ಎಸ್.ಆರ್. ಶ್ರೀನಿವಾಸ್, ಶಿವರಾಜ್ ಸಂಗಪ್ಪ ತಂಗಡಗಿ, ಕೆ.ಎನ್. ರಾಜಣ್ಣ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದು, ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ದಸರಾ ಉತ್ಸವದ ಮೊದಲ ದಿನದಂದು ಸರ್ವೋದಯ ಹೈ ಸ್ಕೂಲ್ ಮೈದಾನದಲ್ಲಿ ಬೆಳಿಗ್ಗೆ ೮ ಗಂಟೆಗೆ ಹಾಟ್ ಏರ್ ಬಲೂನ್, ತುಮಕೂರು ವಿಶ್ವವಿದ್ಯಾನಿಲಯ ಹೆಲಿಪ್ಯಾಡ್‌ನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಹೆಲಿ-ರೈಡ್, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ೪.೩೦ ಗಂಟೆಗೆ ಹಾಸ್ಯ ಚಕ್ರವರ್ತಿ ನರಸಿಂಹರಾಜು ಸಾಂಸ್ಕೃತಿಕ ವೈಭವ ವೇದಿಕೆಯಲ್ಲಿ ಜನಪದ ಮತ್ತು ಶಾಸ್ತ್ರೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಜೆ ೬ ಗಂಟೆಗೆ ರಂಗ ದಸರಾ ನಾಟಕೋತ್ಸವ  ಪ್ರಾರಂಭವಾಗಲಿದೆ. ನಗರದ ಬಿ.ಜಿ.ಎಸ್. ವೃತ್ತದಲ್ಲಿ  ಸಂಜೆ ೬.೩೦ಕ್ಕೆ ದಸರಾ ವಿಶೇಷ ದೀಪಾಲಂಕಾರ ಹಾಗೂ ವಿಶೇಷ ಅಂಬಾರಿ ಸಿಟಿ ಬಸ್ ಪ್ರಯಾಣಕ್ಕೆ ಚಾಲನೆ  ನೀಡಲಾಗುವುದು ಎಂದು ತಿಳಿಸಿದರು.

ಸೆಪ್ಟೆಂಬರ್ ೨೭ರಂದು ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ ಫಲಪುಷ್ಪ ಕಲಾ ಮತ್ತು ಜ್ಞಾನ ವೈಭವ ಸಂಕೀರ್ಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ವಿಂಟೇಜ್ ಕಾರ್ ಶೋ, ವನ್ಯಜೀವಿ ಛಾಯಾಗ್ರಹಣ, ಪಾರಂಪರಿಕ ಕೃಷಿ ಸಾಧನೆಗಳು, ನವರಾತ್ರಿ ಗೊಂಬೆಗಳ ಪ್ರದರ್ಶನ ಸೇರಿದಂತೆ ಹಲವು ಆಕ?ಣೆಗಳನ್ನು ಕಾಣಬಹುದಾಗಿದೆ.  ಇದೇ ದಿನ ಆಹಾರ ಮೇಳ, ಮಹಿಳಾ ಕೌಶಲ್ಯ ಮೇಳ ಮತ್ತು ೨೦೦ ಮಹಿಳೆಯರ ಬೈಕ್ ರೈಡ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ ೨೮ರಂದು  ಕವಿಗಳಿಂದ ಕವಿಗೋಷ್ಠಿ, ಮ್ಯಾರಥಾನ್ ಓಟ, ಕ್ರೀಡಾ ದಸರಾ(ಕುಸ್ತಿ, ವಾಲಿಬಾಲ್, ಕೋ-ಕೋ, ಕಬಡ್ಡಿ) ನಡೆಯಲಿದ್ದು, ಸಂಜೆ ೭ ಗಂಟೆಗೆ  ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ, ಕಂಬದ ರಂಗಯ್ಯನವರ ಸಂಗೀತ ರಸಸಂಜೆ ಹಾಗೂ ಹಸಿರು ಸಿಡಿಮದ್ದು ಪ್ರದರ್ಶನ ಇರಲಿದೆ.

ಸೆಪ್ಟೆಂಬರ್ ೨೯ರಂದು ಸಂಜೆ ೫ ಗಂಟೆಗೆ ಮಹಿಳಾ ಮತ್ತು ಮಕ್ಕಳ ವೈಭವ ಕಾರ್ಯಕ್ರಮದಲ್ಲಿ ರಾಜಾಸ್ಥಾನದ ದಾಂಡಿಯಾ ನೃತ್ಯ, ಜನಪದೋತ್ಸವ ನೃತ್ಯ ಮತ್ತು ನಗೆಹಬ್ಬ ಜನರಿಗೆ ಮನರಂಜನೆ ನೀಡಲಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ ೩೦ರಂದು ಸಂಜೆ ೬.೧೫ ಗಂಟೆಗೆ ಆಳ್ವಾಸ್ ಸಾಂಸ್ಕೃತಿಕ ತಂಡದ  ಕಲಾವಿದರಿಂದ ಭಾರತ ವೈಭವ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ ಡಾ: ವಿ. ರವಿಚಂದ್ರನ್ ಮತ್ತು ನಟಿ ರಮ್ಯಾ ಆಗಮಿಸಲಿದ್ದಾರೆ.

ಅಕ್ಟೋಬರ್ ೧ರಂದು ಆಯುಧ ಪೂಜೆ ಪ್ರಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ೨೫೦೦ ಆಟೋಗಳ ಮೆರವಣಿಗೆ ನಡೆಯಲಿದ್ದು, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಜರುಗಲಿದೆ. ಬಳಿಕ ಅನನ್ಯ ಭಟ್  ಹಾಗೂ ಅನುರಾಧ ವಿಕ್ರಾಂತ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಅಕ್ಟೋಬರ್ ೨ರಂದು ವಿಜಯದಶಮಿ ದಿನ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಂತರ ಮಧ್ಯಾಹ್ನ ೧೨ ಗಂಟೆಗೆ  ನಗರದ ಟೌನ್‌ಹಾಲ್ ವೃತ್ತದಿಂದ ತಾಯಿ ಚಾಮುಂಡೇಶ್ವರಿಯ ಜಂಬೂ ಸವಾರಿ  ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯಲ್ಲಿ  ೫೦ ಗ್ರಾಮ ದೇವತೆಗಳು, ಕುದುರೆಗಳು ಹಾಗೂ ನೂರಾರು ಕಲಾ ತಂಡಗಳು ಭಾಗವಹಿಸಲಿವೆ. ಸಾರ್ವಜನಿಕರು ಮೆರವಣಿಗೆ ವೀಕ್ಷಿಸಲು  ಎಲ್ಲೆಡೆ ವಿಶೇಷ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಸಂಜೆ ಮುಖ್ಯ ವೇದಿಕೆಯಲ್ಲಿ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ., ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜ಼ಮ್ ಜ಼ಮ್, ಮತ್ತಿತರರು ಉಪಸ್ಥಿತರಿದ್ದರು.

 

 

Share This Article
error: Content is protected !!
";