ಗಮಕ ಸೂಕ್ಷ್ಮಾತಿ ಸೂಕ್ಷ್ಮವಾಗಿ ವಿಶ್ಲೇಷಿಸುವ ಕಲಾಪ್ರಕಾರವಾಗಿದೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಗಮಕ ಕಲಾಭಿಮಾನಿಗಳ ಸಂಘದ 40ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ನಡೆಸುತ್ತಿರುವ ಮಾಸಿಕ ಗಮಕ ಕಾರ್ಯಕ್ರಮದ 15ನೇ ಸಮಾರಂಭವು ಭಾನುವಾರ ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ನಡೆಯಿತು.

ಲಕ್ಷ್ಮೀಶ ಕವಿಯ ಜೆಮಿನಿ ಭಾರತದ ಬಕಲ್ಭ್ಯ ಮುನಿಯ  ಪ್ರಸಂಗದ ವಾಚನ ವ್ಯಾಖ್ಯಾನ ನಡೆಯಿತು. ಬೆಂಗಳೂರಿನ ಖ್ಯಾತ ಗಮಕಿ ಎಂ.ಆರ್. ಸತ್ಯನಾರಾಯಣ ಅವರ ವಾಚನಕ್ಕೆ, ವ್ಯಾಖ್ಯಾನ ವಿದ್ವಾನ್ ಟಿ. ಸುಬ್ರಹ್ಮಣ್ಯಭಟ್ ವ್ಯಾಖ್ಯಾನ ನೀಡಿದರು.

ಪಾಂಡವರ ರಾಜಸೂಯ ಯಾಗದ ಸಂದರ್ಭದಲ್ಲಿ ಅವರ ಯಜ್ಞದ ಕುದುರೆಯು ಮೇಯುತ್ತಿರುವುದನ್ನು ಕಂಡ ಕೃಷ್ಣ ಸಹಿತ ಪಾಂಡವರು ಬಕಲ್ಭ್ಯ ಮುನಿಯನ್ನು ನೀವು ಯಾರು? ನಿಮಗೆ ಎಷ್ಟು ವರ್ಷ? ನೀವು ಏನು ಮಾಡುತ್ತಿರುವಿರಿ? ಎಂದು ಕೇಳಿದಾಗ ,

ಆತ ತಾನು ಅನೇಕ ಬ್ರಹ್ಮರ ಕಾಲದಿಂದ ತಲೆಯ ಮೇಲೆ ಒಂದು ರಂದ್ರಯುಕ್ತ ತರಗೆಲೆಯನ್ನು ತಲೆಯ ಮೇಲಿಟ್ಟುಕೊಂಡು ಶ್ರೀ ಕೃಷ್ಣನ ದರ್ಶನಕ್ಕಾಗಿ ತಪಸ್ಸು ಮಾಡುತ್ತಿರುವುದಾಗಿಯೂ ಈಗ ಅನಾಯಾಸವಾಗಿ ಬಂದೊದಗಿದ ಕೃಷ್ಣನ ದರ್ಶನದಿಂದ ತನ್ನ ತಪಸ್ಸು ಫಲಿಸಿತೆಂದು, ತನ್ನ ಜನ್ಮ ಸಾರ್ಥಕವಾಯಿತು ಎಂದು ತಿಳಿಸುವ.. ಪಾಂಡವರು ಆ ಮುನಿಯನ್ನು ವೈಭವದಿಂದ ರಾಜಸೂಯ ಯಾಗದ ಜಾಗಕ್ಕೆ ಬರಮಾಡಿಕೊಂಡ ಕಥಾ ಭಾಗವನ್ನು ಗಮಕಿಗಳು ವಾಚನ ಮತ್ತು ವ್ಯಾಖ್ಯಾನದ ಮೂಲಕ ಶ್ರೋತೃಗಳಿಗೆ ಮನಗಾಣಿಸಿದರು.

ಮಾರುತಿ ಭಜನಾ ಮಂಡಳಿಯವರ ಪ್ರಾರ್ಥನೆಯಲ್ಲಿ ಆರಂಭವಾದ ಸಭೆಯನ್ನು ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ ಹಯವದನ ನಾಟಕದ ಗಿರೀಶ್ ಕಾರ್ನಾಡರು ರಚಿಸಿ, ಬಿ.ವಿ. ಕಾರಂತರು ಸಂಗೀತ ನಿರ್ದೇಶಿಸಿದ ಗಜವದನ ಹೇ ರಂಭಾ ಎಂಬ ರಂಗ ಗೀತೆಯ ಗಾಯನದೊಂದಿಗೆ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಅನಂತ ಕೃಷ್ಣ ಸರ್ವರನ್ನು ಸ್ವಾಗತಿಸಿದರು. ಬಿ .ಎಲ್ .ಉಮಾ ವಂದಿಸಿದರು. ಶಶಿಧರ್ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಹಿಸಿದರು.

ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ರಮಾದೇವಿ ಕೆ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿ, ರಾಮಾಯಣವು ನಾವು ಹೇಗಿರಬೇಕೆಂಬುದನ್ನು, ಮಹಾಭಾರತವು ಹೇಗಿರಬಾರದು ಎಂಬುದನ್ನು, ಭಗವದ್ಗೀತೆಯು ಹೇಗೆ ಜೀವಿಸಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸಿದರೆ. ಗಮಕಲೆಯು ಎಲ್ಲವನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ವಿಶ್ಲೇಷಿಸುವ ಕಲಾಪ್ರಕಾರವಾಗಿದೆ ಎಂದು ಹೇಳಿದರು.

ಖ್ಯಾತ ವಿದ್ವಾಂಸ ಹಾಗೂ ವಿಮರ್ಶಕ ಡಾ. ಬಿ. ರಾಜಶೇಖರಪ್ಪ ಈ ಕಾರ್ಯಕ್ರಮವನ್ನು ವಿಮರ್ಶಿಸುತ್ತಾ ಕನ್ನಡ ಮಹಾಕಾವ್ಯಗಳ ರಸಾ ಸ್ವಾಧನೆಗೆ ಗಮಕ ಕಲೆ ಪರಮ ಸಹಕಾರಿ ಎಂದರು.

ಮುಂದಿನ ಮಾಸಿಕ ಗಮಕ ಕಾರ್ಯಕ್ರಮ:: ದಿ: 17.11.2024ರ ಭಾನುವಾರ ಸಂಜೆ 6 ಗಂಟೆಗೆ ಮಾಸಿಕ ಗಮಕ ಕಾರ್ಯಕ್ರಮವು ಜೆಸಿಆರ್ ಗಣಪತಿ ದೇವಾಲಯದ ಪ್ರಾಂಗಣದಲ್ಲಿ ಗಮಕ ಕಲಾಭಿಮಾನಿಗಳ ಸಂಘದೊಂದಿಗೆ ಜೆಸಿಆರ್ ಗಣಪತಿ ದೇವಾಲಯ ಸಮಿತಿ, ಚಿತ್ರದುರ್ಗ ನಗರದ ಸ್ವರಾತ್ಮಕ ಸಂಗೀತ ಶಾಲೆ, ಶಾರದಾ ಸಂಗೀತ ಶಾಲೆ ಹಾಗೂ ನಗರದ 22ನೇ ವಾರ್ಡ್ ನ  ಕ್ಷೇಮಾಭಿವೃದ್ಧಿ ಸಂಘ ಇವುಗಳ ಸಂಯುಕ್ತಾಶ್ರಯಲ್ಲಿ 69ನೇ ಕನ್ನಡ ರಾಜ್ಯೋತ್ಸವ  ಸಂಭ್ರಮ ಕಾರ್ಯಕ್ರಮವು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

- Advertisement -  - Advertisement - 
Share This Article
error: Content is protected !!
";