ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಪಟ್ಟಣದ ಎನ್.ಐ. ಬಡಾವಣೆಯಲ್ಲಿ 15ನೇ ವರ್ಷದ ಅಥರ್ವ ಗಣಪತಿ ಸೇವಾ ಸಮಿತಿ ವತಿಯಿಂದ ವಿಘ್ನ ನಿವಾರಕ ಶ್ರೀ ಗಣೇಶ ಮಹೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಎನ್.ಐ. ಲೇಔಟ್ ನಲ್ಲಿನ ಎಂ.ಎಸ್.ಮಂಜುನಾಥ ರವರ ವಿಶಾಲವಾದ ನಿವೇಶನದಲ್ಲಿ ಸುಂದರವಾಗಿ ವಿದ್ಯುತ್ ದೀಪಗಳಿಂದ ಅಲಂಕೃತ ಸುಂದರ ಮಂಟಪದಲ್ಲಿ ವಿಶಿಷ್ಟ ವಿನ್ಯಾಸವುಳ್ಳ ಶ್ರೀ ವಿಘ್ನೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಶ್ರೀ ವಿನಾಯಕನ ಮೂರ್ತಿಗೆ ವಿವಿಧ ಪುಷ್ಪಗಳ ಮಾಲೆಗಳನ್ನು ಹಾಕಿ ಅಲಂಕೃತಗೊಳಿಸಿ, ಶ್ರೀಗಣೇಶನ ಪೂಜೆಗೆ ನಾನಾ ವಿಧದ ಸಿಹಿ ತಿನಿಸುಗಳನ್ನು ನೈವೇದ್ಯಕ್ಕಿರಿಸಿ ಹೂವು, ಹಣ್ಣು, ತೆಂಗಿನ ಕಾಯಿ, ಗರಿಕೆ, ಬಿಲ್ವ ಪತ್ರೆ , ಕರ್ಪೂರ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ಗಣೇಶನ ದರ್ಶನಕ್ಕೆ ಆಗಮಿಸಿದ ಈ ಬಡಾವಣೆಯ ನೂರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಅಕ್ಷತೆಯೊಂದಿಗೆ ಗರಿಕೆಯನ್ನು ಅರ್ಪಿಸಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲಾಯಿತು. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ಶ್ರೀ ಗಣೇಶೋತ್ಸವದ ಅಂಗವಾಗಿ ಎನ್.ಐ.ಲೇ ಔಟ್ ಮಕ್ಕಳಿಂದ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಸೆ.೮ ರಂದು ಈ ಬಡಾವಣೆ ಮಕ್ಕಳು, ಹಿರಿಯರು, ಮಹಿಳೆಯರು ಮತ್ತು ಪುರುಷರಿಗೆ ಒಳಾಂಗಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಸೆ.೯ ರಂದು ಕ್ರೀಡಾಕೂಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಗುವುದೆಂದು ಈ ಬಡಾವಣೆಯ ಶ್ರೀ ಅಥರ್ವ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಗಣೇಶೋತ್ಸವದ ಪ್ರತಿಷ್ಠಾಪನಾ ಪೂಜಾ ಕಾರ್ಯದಲ್ಲಿ ಎನ್.ಐ.ಬಡಾವಣೆಯ ನಿವಾಸಿಗಳು, ಹಾಗೂ ಶ್ರೀ ಅಥರ್ವ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು, ಮಹಿಳೆಯರು , ಮಕ್ಕಳು ಹಾಗೂ ಹೆಚ್ಚಿನ ಭಕ್ತರು ಭಾಗವಹಿಸಿದ್ದರು.