ಭಾರತೀಯರ ಸ್ವಾತಂತ್ರ್ಯದ ಕನಸು ನನಸು ಮಾಡಿದ ಗಾಂಧೀಜಿ : ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಕಿಚ್ಚು ಆರಂಭವಾಗಿದ್ದೇ ಕರ್ನಾಟಕ ಬೆಳಗಾವಿಯಲ್ಲಿ. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಮಹಾತ್ಮಗಾಂಧೀಜಿ ಸಭೆಯ ಅಧ್ಯಕ್ಷತೆ ವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡದಲು ಸಭೆ ಅವರಿಗೆ ಸಂಪೂರ್ಣ ಸರ್ವಾನುಮತದ ಒಪ್ಪಿಗೆ ನೀಡಿದ ನಂತರ ದೇಶದ ಸ್ವಾತಂತ್ರ್ಯ ಪಡೆಯುವ ಕನಸಿಗೆ ಗಾಂಧಿಯವರು ಮುನ್ನುಡಿ ಬರೆದು ಇಂದಿಗೆ ೧೦೦ ವರ್ಷಗಳು ಸಂದಿದ್ದು, ಗಾಂಧಿ ಭಾರತ  ಎಂಬ ಕಾರ್ಯಕ್ರಮದಡಿ ಒಂದು ಕಿ.ಮೀ ಪಾದಯಾತ್ರೆ ನಡೆಸಿ ಗಾಂಧಿಯವರ ಸ್ವಾತಂತ್ರ್ಯದ ಹೆಜ್ಜೆ ಗುರುತಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಗಾಂಧಿ ನಡಿಗೆ ಮೂಲಕ ಸ್ಮರಿಸಿದೆ ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಬುಧವಾರ ಬೆಂಗಳೂರು ರಸ್ತೆಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗಾಂಧಿನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಸಕರ ಭವನದ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮಗಾಂಧೀಜಿಯವರು ಅಹಿಂಸಾ ತತ್ವದ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ಧಾರೆ. ನೂರಾರು ವರ್ಷಗಳ ಕಾಲ ಬ್ರಿಟೀಷರ ಕಪಿಮುಷ್ಠಿಯ ಆಡಳಿತಕ್ಕೆ ಭಾರತೀಯರು ರೋಸಿದ್ದರು.

ಬ್ರಿಟೀಷರನ್ನು ವಿರೋಧಿಸುವ ದೈರ್ಯ ಯಾರಿಗೂ ಇರಲಿಲ್ಲ. ಇಡೀ ದೇಶವೇ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತು. ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆಯುವ ಸಂಕಲ್ಪ ಭಾರತೀಯರಾಗಿತ್ತು. ಭಾರತೀಯರ ಸ್ವಾತಂತ್ರ್ಯದ ಕನಸನ್ನು ನನಸು ಮಾಡಿದ ಗಾಂಧಿಯವರು ನಮ್ಮೆಲ್ಲರ ಪಾಲಿನ ಹೆಮ್ಮೆಯ ರಾಷ್ಟ್ರಿಪಿತ ಮಹಾತ್ಮಗಾಂಧೀಜಿಯಾದರು. ಕಾಂಗ್ರೆಸ್ ಪಕ್ಷ ಅವರ ಸೇವೆಯನ್ನು ಸದಾಸ್ಮರಿಸುತ್ತದೆ ಎಂದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಹಾತ್ಮಗಾಂಧೀಜಿಯವರ ಸ್ವಾತಂತ್ರ್ಯದ ಹೋರಾಟದ ಬಗ್ಗೆ ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಗಾಂಧಿನಡಿಗೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇಡೀ ದೇಶವೇ ಮಹಾತ್ಮಗಾಂಧೀಜಿಯವರ ತ್ಯಾಗ, ಬಲಿದಾನದ ಬಗ್ಗೆ ಹೆಮ್ಮೆ ಪಡುತ್ತಿದೆ.

ವಿಶ್ವದಲ್ಲೇ ಪ್ರಜಾಪ್ರಭುತ್ವದಡಿಯಲ್ಲಿ ಆಡಳಿತ ನಡೆಸುತ್ತಿರುವ ನಮಗೆ ನಮ್ಮ ಸಂವಿಧಾನವೇ ಪ್ರೇರಣೆ. ಮಹಾತ್ಮಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಲಾಲ್‌ಬಹದ್ದೂರುಶಾಸ್ತ್ರಿಯಂತಹ ಮಹಾನ್ ನಾಯಕರು ನಮ್ಮೆಲ್ಲರಿಗೂ ಆದರ್ಶಪ್ರಾಯರು.

ನಾವೆಲ್ಲರೂ ನಮ್ಮ ಬದುಕಿನಲ್ಲಿ ಏನೇ ಸಾಧನೆ ಮಾಡಲಿ ಇಂತಹ ಮಹಾನ್ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ನಡೆಯೋಣ. ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶಕ್ಕಾಗಿ ಸೇವೆ ಸಲ್ಲಿಸಿದ ನಾಯಕರ ಸ್ಮರಣೆ ಸಾಧ್ಯ. ಬಿಜೆಪಿಯವರಿಗೆ ಸ್ವಾತಂತ್ರ್ಯದ ಬಗ್ಗೆ ಯಾವುದೇ ರೀತಿಯ ವಿಶ್ವಾಸವಿಲ್ಲ, ಕೇವಲ ಸರ್ಕಾರದ ವಿರುದ್ದ ಟೀಕೆ ಮಾಡುವುದನ್ನು ಮಾತ್ರ ಮುಂದುವರೆಸಿದ್ದಾರೆಂದರು.

ಗಾಂಧಿನಡಿಗೆ ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾಸುರೇಶ್‌ಬಾಬು, ರವಿಕುಮಾರ್, ಬಾಬುರೆಡ್ಡಿ, ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಮಾತನಾಡಿದರು. 

ಗಾಂಧಿನಡಿಗೆ ಕಾರ್ಯಕ್ರಮ ಬೆಂಗಳೂರು ರಸ್ತೆಯ ಕಾಂಗ್ರೆಸ್ ಕಚೇರಿಯಿಂದ ನೆಹರೂ ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಶಾಸಕರ ಭವನಕ್ಕೆ ಆಗಮಿಸಿತು. ಪಕ್ಷ ನೂರಾರು ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಕವಿತಾಬೋರಯ್ಯ, ಸುಮಾಭರಮಣ್ಣ, ಸಾವಿತ್ರಮ್ಮ, ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಮುಖಂಡರಾದ ಟಿ.ಪ್ರಭುದೇವ್, ಪಿ.ತಿಪ್ಪೇಸ್ವಾಮಿ, ಶಶಿಧರ, ಚನ್ನಕೇಶವಮೂರ್ತಿ, ಸ್ವಾಮಿ, ಲಕ್ಷ್ಮಿದೇವಿ, ಬಿ.ಎಂ.ಭಾಗ್ಯಮ್ಮ, ಗೀತಾಬಾಯಿ, ಸುರೇಶ್, ರಾಘವೇಂದ್ರ, ಚೌಳೂರುಪ್ರಕಾಶ್, ಸೈಪುಲ್ಲಾ, ಭೀಮಣ್ಣಕುರುಗುಂದ, ಬಷೀರ್‌ಸಾಬ್ ಮುಂತಾದವರು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";