ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಭಾರತ ಇಂದು ಆರ್ಥಿಕವಾಗಿ ಜಗತ್ತಿನ ಐದನೇ ದೊಡ್ಡ ದೇಶವಾಗಿ ಗುರುತಿಸಿಕೊಂಡಿದೆ ಎಂದು ಉಪ ವಿಭಾಗಾಧಿಕಾರಿಗಳಾದ ದುರ್ಗಾ ಶ್ರೀ ಅವರು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ವತಿಯಿಂದ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ 79ನೇ ಸ್ವಾತಂತ್ರೋತ್ಸವ ದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ನಮ್ಮ ದೇಶ ಸ್ವತಂತ್ರವಾದ ಅತ್ಯಂತ ಪವಿತ್ರವಾದ ಈ ದಿನದಂದು ನಾವೆಲ್ಲರೂ ಸಹ ಭಾರತೀಯರು ಎನ್ನುವುದಕ್ಕೆ ಅಭಿಮಾನ ಪಡಬೇಕು, ಜಗತ್ತಿಗೆ ಆಧ್ಯಾತ್ಮಿಕ ಚಿಂತನೆಯನ್ನು ನೀಡಿ, ಧಾರ್ಮಿಕತೆಯ ಮಹತ್ವವನ್ನು ತಿಳಿಸಿಕೊಟ್ಟ ದೇಶ ನಮ್ಮ ಭಾರತ, ವೈಜ್ಞಾನಿಕವಾಗಿ ಮತ್ತು ಇತರೆ ಅನೇಕ ಕ್ಷೇತ್ರಗಳಲ್ಲಿ ಜಗತ್ತಿನ ಬಹಳಷ್ಟು ರಾಷ್ಟ್ರಗಳಿಗಿಂತ ನಾವು ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಮುಂದಿದ್ದೇವೆ ಎನ್ನುವುದು ಸಹ ನಮ್ಮ ಅಭಿಮಾನದ ವಿಚಾರ.
ಭಾರತ ಇಂದು ಆರ್ಥಿಕವಾಗಿ ಜಗತ್ತಿನ ಐದನೇ ದೊಡ್ಡ ದೇಶವಾಗಿ ಗುರುತಿಸಿಕೊಂಡಿದೆ ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ ನಾಲ್ಕನೇ ಆರ್ಥಿಕತೆಯ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ನಮ್ಮ ವ್ಯವಸ್ಥೆ ಸಾಗಿದೆ.
ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ರವರ ಪಾತ್ರ ಅತ್ಯಂತ ಪ್ರಮುಖವಾದದ್ದು. ಅದೇ ನಿಟ್ಟಿನಲ್ಲಿ ಕ್ರಾಂತಿಕಾರಿಗಳು ಸಹ ತಮ್ಮದೇ ಆದ ರೀತಿಯಲ್ಲಿ ಹೋರಾಟವನ್ನು ಮಾಡಿ ಭಗತ್ ಸಿಂಗ್, ಸುಖದೇವ್ ರಾಜ್ ಗುರು ಮುಂತಾದವರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಚಂದ್ರಶೇಖರ್ ಅಜಾದ್ ಅವರ ತ್ಯಾಗವನ್ನು ಸಹ ಸುವರ್ಣಾಕ್ಷರದಲ್ಲಿ ಬರೆಯುವಂತದ್ದು. ಇದೇ ರೀತಿ ಸುಭಾಷ್ ಚಂದ್ರ ಬೋಸ್ರ ಮತ್ತೊಂದು ರೀತಿಯ ಹೋರಾಟ ದೇಶದಲ್ಲಿ ಸ್ವಾತಂತ್ರ ಚಳುವಳಿಗೆ ಅಪಾರ ಬೆಂಬಲವನ್ನು ಮತ್ತು ನೆರವನ್ನು ಒದಗಿಸಿರುತ್ತದೆ.
ಈ ಸ್ವಾತಂತ್ರ್ಯ ಒಂದು ದಿನದಲ್ಲಿ ಬಂದದ್ದಲ್ಲ, ದಶಕಗಳ ಹೋರಾಟ, ಅನೇಕ ಸತ್ಯಾಗ್ರಹಗಳು, ಕಾರಾಗೃಹ ಜೀವನ, ನಿರ್ಭಯವಾದ ಬಲಿದಾನಗಳು, ಇವುಗಳ ಫಲವಾಗಿ ನಮಗೆ ಸ್ವಾತಂತ್ರ್ಯ ಬಂದಿದೆ. ಪ್ರತಿ ಹಳ್ಳಿಯಲ್ಲೂ ಪ್ರತಿ ಪಟ್ಟಣದಲ್ಲೂ ಪ್ರತಿ ಮನಸ್ಸಿನಲ್ಲೂ ಸ್ವಾತಂತ್ರ್ಯದ ಕನಸು ಹೊತ್ತ ಹೋರಾಟಗಾರರು ಜನ್ಮ ಪಡೆದಿದ್ದರು. ಕರ್ನಾಟಕ ರಾಜ್ಯದಲ್ಲೂ ಸಹ ವಿದುರಾಶ್ವತ್ಥದಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಶಿವಮೊಗ್ಗದ ಈಸೂರಿನಲ್ಲಿ, ಬೆಳಗಾಂನಲ್ಲಿ ದೊಡ್ಡ ಪ್ರಮಾಣದ ಹೋರಾಟಗಳು ನಡೆದು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹಲವಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಸ್ಮರಿಸಿದರು.
ಸ್ವಾತಂತ್ರ್ಯಗಳಿಸಿದ 79 ವರ್ಷದ ಅವಧಿಯಲ್ಲಿ ನಮ್ಮ ದೇಶ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೂರದೃಷ್ಟಿತ್ವದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಪ್ರಗತಿಯನ್ನು ಸಾಧಿಸುತ್ತಿವೆ. ಸ್ವಾವಲಂಬಿ, ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ತನ್ಮೂಲಕ ಸಮೃದ್ಧ ಕರ್ನಾಟಕದ ನಿರ್ಮಾಣಕ್ಕೆ ಇವೆಲ್ಲವೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶವನ್ನು ಕಾಯುವ ಸೈನಿಕರು, ನಮ್ಮ ಹಸಿವನ್ನು ನೀಗಿಸುವ ಅನ್ನದಾತರು ಮತ್ತು ಕೈಗಾರಿಕೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬೆವರು ಸುರಿಸಿ ದುಡಿಯುತ್ತಿರುವ ಕಾರ್ಮಿಕರ ಪಾತ್ರವೂ ಸಹ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಹಾಗೂ ನಿರ್ಣಾಯಕವಾದ ಸಂಗತಿಯಾಗಿದೆ ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ನಮ್ಮ ಗೌರವದ ನಮಸ್ಕಾರಗಳನ್ನ ಸಲ್ಲಿಸೋಣ ಎಂದರು.
ಮುಂದಿನ ದಿನಗಳಲ್ಲಿ ನಾವೆಲ್ಲರೂ ದೇಶ ಅಭಿಮಾನ ಮತ್ತು ರಾಷ್ಟ್ರಭಕ್ತಿಯ ಮೂಲಕ ಈ ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮೆಲ್ಲರ ಶ್ರಮ ಮತ್ತು ದುಡಿಮೆಯನ್ನು ಅರ್ಪಿಸೋಣ ಎಂದು ಕರೆಕೊಟ್ಟರು.
ಇದಕ್ಕೂ ಮುನ್ನ ಆಕರ್ಷಕ ಪಥ ಸಂಚಲನ ಮತ್ತು ಗೌರವ ವಂದನೆ ಸ್ವೀಕರಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ನಗರಸಭಾ ಅಧ್ಯಕ್ಷರಾದ ಸುಮಿತ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾವಿರಾರು ವಿಧ್ಯಾರ್ಥಿಗಳು ಭಾಗವಹಿಸಿದ್ದರು.
“ನಮ್ಮ ದೇಶ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ದೇಶ ಅರ್ಥಿಕ ಬಹಳಷ್ಟು ತೊಂದರೆ ಯಲ್ಲಿತ್ತು ಅದರೆ ಈಗ ಪ್ರಪಂಚದಲ್ಲೇ ಐದನೇ ದೊಡ್ಡ ರಾಷ್ಟ್ರವಾಗಿದೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ದೇಶ ಅಭಿಮಾನ ಮತ್ತು ರಾಷ್ಟ್ರಭಕ್ತಿಯ ಮೂಲಕ ಈ ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮೆಲ್ಲರ ಶ್ರಮವನ್ನು ಮತ್ತು ದುಡಿಮೆಯಿಂದ ದೇಶವನ್ನ ಆರ್ಥಿಕ ವ್ಯವಸ್ಥೆ ಯಿಂದ ಬಲ ಪಡಿಸೋಣ”.
ಧೀರಜ್ ಮುನಿರಾಜು, ಶಾಸಕರು, ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ

