ರಾಗಿಗುಡ್ಡ ಬಡಾವಣೆಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಗಣೇಶೋತ್ಸವ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶಮೂರ್ತಿಗಳಿಗೆ, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು (hindu and muslim society leaders) ಒಟ್ಟಾಗಿ ಪೂಜೆ ಸಲ್ಲಿಸಿ ಸೌಹಾರ್ದ – ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಮಂಗಳವಾರ ಸಂಜೆ ಸೌಹಾರ್ದತೆ ಸನ್ನಿವೇಶಕ್ಕೆ, ರಾಗಿಗುಡ್ಡದ ವಿವಿಧ ಗಣೇಶಮೂರ್ತಿಗಳ ಪ್ರತಿಷ್ಠಾಪನೆ ಸ್ಥಳಗಳು ಸಾಕ್ಷಿಯಾದವು. ಈ ವೇಳೆ ರಾಗಿಗುಡ್ಡ ಶಾಂತಿ ಪಡೆ ಸಮಿತಿ ಸದಸ್ಯರು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಪೊಲೀಸ್ ಇಲಾಖೆ ಸೆ. 11 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಭಾವೈಕ್ಯತೆ : ಈ ವೇಳೆ ರಾಗಿಗುಡ್ಡದ ಮುಖಂಡರುಗಳು ಮಾತನಾಡಿದರು. ‘ಹಿಂದು ಮತ್ತು ಮುಸ್ಲಿಂರ ಭಾವೈಕ್ಯತೆ ಸಂಕೇತವಾಗಿ, ಒಟ್ಟಿಗೆ ಸೇರಿ ಗಣೇಶ ಪೂಜೆ ನಡೆಸುತ್ತಿದ್ದೆವೆ. ನಮ್ಮ ದೇಶದಲ್ಲಿ ವಿವಿಧ ಜಾತಿ, ಧರ್ಮ ಮತ್ತು ಜನಾಂಗದವರಿದ್ದಾರೆ. ವಿವಿಧತೆಯಲ್ಲಿ ಏಕತೆ ಸಾರುವ ದೇಶವಾಗಿದೆ.

ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಗಳು ಪ್ರಮುಖವಾದ ಹಬ್ಬಗಳಾಗಿವೆ. ನಮ್ಮೆಲ್ಲರ ಭಾವೈಕ್ಯತೆ ಮತ್ತು ಒಗ್ಗಟ್ಟು ತೋರಿಸಲು ಈ ಸಂದರ್ಭ ಒದಗಿಬಂದಿರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯು ಎಲ್ಲ ರೀತಿಯ ಸಹಕಾರ ನೀಡಿ ರಾಗಿಗುಡ್ಡದ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಹಬ್ಬದ ಆಚರಣೆ ಮತ್ತು ಇತರೆ ಕಾರ್ಯಕ್ರಮಗಳು ಯಶಸ್ವಿಯಾಗಲೂ ಕಾರಣಕರ್ತರಾಗಿದ್ದಾರೆ. ಪೊಲೀಸ್ ಇಲಾಖೆಯ ಅವಿರತ ಸೇವೆಯು ಶ್ಲಾಘನೀಯವಾಗಿರುತ್ತದೆ’ ಎಂದು ತಿಳಿಸಿದ್ದಾರೆ.

‘ಹಬ್ಬದ ಯಶಸ್ಸಿನಲ್ಲಿ ನಮ್ಮೆಲ್ಲರ ಸಹಮತ ಮುಖ್ಯವಾಗಿರುತ್ತದೆ. ಯಾರೋ ಕೆಲ ಕಿಡಿಗೇಡಿತನದಿಂದ ಮತ್ತು ಯಾವುದೋ ಸನ್ನಿವೇಶದಲ್ಲಿ ಕಳೆದ ಬಾರಿ ಕಹಿ ಘಟನೆಗಳು ಜರುಗಿರುತ್ತವೆ. ಆದರೆ ಅದೆಲ್ಲವನ್ನು ಮರೆತು ಯಾವುದೇ ವೈಮನಸ್ಸು ಮತ್ತು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಂಡು ಒಟ್ಟಾಗಿ ಮುಂದೆ ಸಾಗೋಣ.

ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಜರುಗದಂತೆ ನಾವೆಲ್ಲರೂ ಶ್ರಮಿಸೋಣ. ಸಹೋದರತ್ವದ ಮನೋಭಾವದೊಂದಿಗೆ, ಎಲ್ಲ ಧರ್ಮದ ಹಬ್ಬಗಳಲ್ಲಿ ಒಟ್ಟಾಗಿ ಭಾಗವಹಿಸಿ ಹಬ್ಬಗಳನ್ನು ಸೌಹಾರ್ದತೆಯಿಂದ ವಿಜೃಂಭಣೆಯಾಗಿ ಆಚರಿಸೋಣ.

ಹಿಂದಿನ ವರ್ಷ ಈ ಪ್ರದೇಶದಲ್ಲಿ ಜರುಗಿದ ಕಳಂಕ ತೊಳೆಯೋಣ. ನಮ್ಮ ಮುಂದಿನ ಪೀಳಿಗೆಗೆ, ಮಕ್ಕಳಿಗೆ ಮತ್ತು ಸಮಾಜದ ಇತರರಿಗೆ ಉತ್ತಮ ಸಂದೇಶ ಸಾರುವ ಮುಖಾಂತರ ಮಾದರಿಯಾಗೋಣ’ ಎಂದು ಎರಡೂ ಧರ್ಮಗಳ ಮುಖಂಡರು ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಗಿಗುಡ್ಡದ ನಿವಾಸಿಗಳಾದ ನೂರ್ ಮಸೀದಿ ಅಧ್ಯಕ್ಷ ಭಾಷಾ ಸಾಬ್, ವಕೀಲರಾದ ರಾಮಚಂದ್ರ, ದೇವಸ್ಥಾನ ಸಮಿತಿ ಸದಸ್ಯರಾದ ಗಾರೆ ನಾಗಣ್ಣ, ನೂರ್ ಮಸೀದಿ ಉಪಾಧ್ಯಕ್ಷರಾದ ಸಾದಿಕ್,

ಸ್ಥಳೀಯ ಪ್ರಮುಖರುಗಳಾದ ಬಸವರಾಜ್, ನಾಗರತ್ನಮ್ಮ, ರುದ್ರೋಜಿ ರಾವ್, ಮಾರುತಿ, ಭಾಷಾ ಸಾಬ್, ಸಯ್ಯದ್ ಅಕ್ರಮ್, ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಸತ್ಯ ನಾರಾಯಣ, ಸಬ್ ಇನ್ಸ್’ಪೆಕ್ಟರ್ ಸ್ವಪ್ನ ಮತ್ತವರ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";