ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾತಾವರಣ ಅಷ್ಟೊಂದು ಬಿಗುವಾಗಿರಲಿಲ್ಲ, ಆದ್ರೇ ವೇಣು ಮಾತ್ರ ಗಂಭೀರವಾಗಿಯೇ ಆರಂಭಿಸಿಕೊಂಡಿದ್ದರು. ಬ್ರೋಕರ್ ಶ್ರೀನಿವಾಸ್ ಮತ್ತಷ್ಟು ಫೋಟೋಗಳ ಜೊತೆ ಅಲ್ಲಿಯೇ ನಿಂತಿದ್ದ. ಮಾತಿಗೆ ಮುಂದಾದದ್ದು ವೇಣು ವೇ, ವೀರು ಈ ಫೋಟೋಗಳಲ್ಲಿ ನೀನೊಪ್ಪುವ ಹುಡುಗಿ ಸೆಲೆಕ್ಟ್ ಮಾಡ್ಕೋ, ನಿನ್ನ ಮದ್ವೆನಾ ಬೇಗನೆ ಮಾಡಿ ಮುಗಿಸ್ಬೇಕಿದೆ.
ಡ್ಯಾಡಿ ಸ್ವಲ್ಪ ಅವಕಾಶ ಕೊಡಿ, ಅಮ್ಮ ತೀರ್ಕೊಂಡು ವರ್ಷ ಆಗಿಲ್ಲ, ಆ ನೋವು ಇನ್ನೂ ಎಲ್ರ ಮನಸಲ್ಲಿದೆ, ಅದಕ್ಯಾಕೆ ಇಷ್ಟೊಂದು ಅವಸರ. ನೀನು ಹೇಳ್ದಾಗೆ ನಾನು ಕೇಳೋಕಾಗಲ್ಲ, ಫೋಟೋ ತರ್ಸಿದೀನಿ ಒಪ್ಪಿರೋ ಹುಡುಗಿಯನ್ನ ತೋರಿಸು, ಮಾತಾಡುತ್ತಲೇ ವೇಣು ಶ್ರೀನಿವಾಸ್ ಕಡೆ ಕಣ್ಣಾಯಿಸಿ ಅವನಿಗೆ ಆ ಫೋಟೋಗಳು ಕೊಡ್ರಿ ಅಂದ್ರು.
ವೀರೇಶ್ ಗೂ ಕೂಡ ಇಷ್ಟೊಂದು ಬಲವಂತವೇಕೆ ಅನ್ನುವುದು ಮನಸ್ಸಲ್ಲಿ ಕಾಡತೊಡಗಿತ್ತು?
ಮುಂದಿದ್ದ ಟೇಬಲ್ ಮೇಲೆ ಸುಮಾರು ಫೋಟೋಗಳನ್ನ ಹರಡಿದ್ದ ಶ್ರೀನಿವಾಸ್, ಹೆಸರು ವಿವರಗಳನ್ನು ಒಂದೊಂದಾಗಿ ಹೇಳತೊಡಗಿದ್ದ. ವೀರೇಶ್ ಗೆ ಅದ್ಯಾವುದರ ಕಡೆಗೂ ಮನಸ್ಸಿರಲಿಲ್ಲ, ಶ್ರೀನಿವಾಸನ ವಿವರಗಳಿಗೆ ಸ್ವಲ್ಪವೂ ಗಮನ ಕೊಡದೆ, ಶಾಮ್ ರಾವ್ ಬಡಾವಣೆಯ ಮಂಜುನಾಥ್ ಅವ್ರು ಸುಮಾರು ದಿನಗಳಿಂದ ಈ ಕಡೆ ಬಂದು ಹೋಗ್ತಿದ್ದಾರೆ, ಅವರಿಗೂ ಒಬ್ಬ ವಯಸ್ಸಿಗೆ ಬಂದಿರೋ ಮಗಳಿದ್ದಾಳೆ ಅದು ಏನಾಯ್ತು, ಅವ್ರು ಯಾಕ್ ಬರುತ್ತಿದ್ರೂ ಅಂತ ನನಗೆ ಗೊತ್ತಾಗಲಿಲ್ಲ.
ಶ್ರೀನಿವಾಸ ವಿವರಣೆ ಸ್ಥಗಿತವಾಗಿಸಿ ವೇಣುರವರ ಮುಖವನ್ನೇ ದಿಟ್ಟಿಸಿದ. ವಿಷಯ ಇಬ್ಬರನ್ನೂ ಸ್ವಲ್ಪ ತದಕ್ಕಿದಂತಿತ್ತು. ತೋರಗೊಡದ ವೇಣು, ಅದನ್ನು ತಗೊಂಡು ನೀನ್ ಏನ್ ಮಾಡ್ತೀಯೋ, ಈ ಫೋಟೋಗಳು ನೋಡು, ಇಲ್ಲ ಅಂದ್ರೆ ಇನ್ನಷ್ಟು ಫೋಟೋ ತರಿಸ್ಕೊಂಡು ನೋಡು. ಅಂದ್ರೆ ನಿಮ್ಮ ಮಾತಿನ ಅರ್ಥ ಏನು ಅಂತ ನನಗೆ ಮನವರಿಕೆ ಆಗ್ಲಿಲ್ಲ.
ಸಿಟ್ಟಿನಿಂದಲೇ ವೇಣು ಮಾತುಗಳು ನುಗ್ಗಿದವು. ಮಂಜುನಾಥ್ ಮಗಳ ಫೋಟೋ ಕೊಟ್ಟರೆ ಮನವರಕೆ ಆಗುತ್ತಾ, ಹಾಗಾದ್ರೆ ಕೊಡ್ತೀನಿ ಚೆನ್ನಾಗಿ ನೋಡುವಂತೆ, ಅದು ನಿನ್ನ ಚಿಕ್ಕಮ್ಮನ ಫೋಟೋ ಅಂತ ಜ್ಞಾಪಕ ಇರಲಿ. ಏನು ನನ್ನ ಚಿಕ್ಕಮ್ಮನ ಫೋಟೋನಾ ! ಹೌದು ನಿನ್ನ ಚಿಕ್ಕಮ್ಮನ ಫೋಟೋನೇ, ನನಗೇ ಹೆಂಡತಿಯಾಗೋಳು.
ಇದ್ದಕ್ಕಿದ್ದಂತೆ ವಿಷಯ ಪ್ರಸ್ತಾಪಿಸಿದ್ದ ಕಂಡು ವೀರೇಶ್ ಉದ್ವೇಗಕ್ಕೊಳಗಾದ. ಡ್ಯಾಡಿ ಏನಾಗಿದೆ ನಿಮಗೇ, ಅವಳು ನಮ್ಮ ಭಾರತಿ ಫ್ರೆಂಡ್,ನಿಮ್ಮ ಮಗಳ ವಯಸ್ಸು, ಅವಳನ್ನ ನಾನು ಚಿಕ್ಕಮ್ಮಾ ಅಂತ ಹೇಗೆ ಕರೀಲಿ.
ನಿನ್ನ ಡ್ಯಾಡಿ ತಾಳಿ ಕಟ್ಕೊಂಡು ಕರ್ಕೊಂಡು ಬಂದ್ರೆ,ಅವಳನ್ನ ಯಾವ ರೀತಿ ಕರಿಬೇಕಂತಿದಿಯಾ? ಅವಳು ಈ ಮ್ಯಾರೇಜ್ ಗೆ ಒಪ್ಕೊಂಡಿದ್ದಾಳಾ ಅಷ್ಟೇಳ್ರಿ. ಅಲ್ಲಿವರೆಗೂ ಸುಮ್ಮನಿದ್ದ ಶ್ರೀನಿವಾಸ್, ಎಲ್ಲದೂ ಮುಗಿದಿದೆ ವೀರೇಶ್, ನೀವು ಬೇರೆ ಹುಡುಗಿ ಸೆಲೆಕ್ಟ್ ಮಾಡಿಬಿಟ್ರೇ ಈ ಮನೇಲಿ ಎರಡು ಮದ್ವೆ ನಡೀತಾವೆ,ಅಮ್ಮಾವ್ರು ಹೋದಮೇಲೆ ಈ ಮನೆ ಬಿಕೋ ಅಂತಿದೆ,ಅದಕ್ಕೆ ಮಂಗಳಕಾರ್ಯ ಜರುಗಿದ್ರೇ ಎಲ್ಲವೂ ಸರಿ ಹೋಗುತ್ತೆ.
ವಧು ಫೋಟೋಗಳನ್ನು ಟೇಬಲ್ ಮೇಲೆ ಹರಡುತ್ತಾ, ಲಕ್ಷ ಲಕ್ಷ ತಂದು ಕೊಡೋವು, ಫಿಲಂ ಹೀರೋಯಿನ್ ತರ ಇದಾರೆ, ನೋಡಿ ಸೆಲೆಕ್ಟ್ ಮಾಡ್ಕೊಳಿ, ಆ ಬಡವನ ಮಗಳ ಬಗ್ಗೆ ಯಾಕೆ ಚರ್ಚೆ ಮಾಡ್ತೀರ. ಶ್ರೀನಿವಾಸನ ಮಾತುಗಳು ವೀರೇಶ್ ಗೆ ಸಿಟ್ಟು ತರಿಸಿ ನೆತ್ತಿಗೇರಿಸಿದಂತಿದ್ದವು.
ಬಾಯಿ ಮುಚ್ಕೊಂಡು ನಿಂತ್ಕೊಳ್ರಿ, ಮಧ್ಯ ತಲೆ ಹಾಕಿ ಮಾತಾಡೋ ಉಸಾಬರಿ ನಿಮಗೆ ಬೇಡ, ಡ್ಯಾಡಿ ನೀವು ಮ್ಯಾರೇಜ್ ಆಗ್ಬೇಕು ಅನ್ನೋದು ನಿಜಾನಾ. ಹೌದು ವೀರು, ನಿನ್ನ ತಲೆ ಮೇಲೆ ನಾಲ್ಕು ಅಕ್ಕಿಕಾಳು ಹಾಕಿದ್ಮೇಲೆ,ಈ ಮನೇಲಿ ನನ್ನ ನೋಡ್ಕೊಳ್ಳೋರು ಯಾರಿದಾರೆ, ನಿನ್ನ ತಾಯಿ ಬದುಕಿದ್ದಿದ್ರೆ ನಾನ್ಯಾಕೆ ಆಗ್ತಿದ್ದೆ. ಹಾಗಾದ್ರೆ ನಂದು ಕೇಳ್ಕೊಳ್ಳಿ, ತಂದೆ ಜೊತೆ ಮಂಟಪದಲ್ಲಿ ಹಸೆಮಣೆ ಮೇಲೆ ನಾನು ಕೂರ್ಲಾರೆ, ಅಷ್ಟು ತುರ್ತಾದ ಹೆಣ್ಣಿನ ಅವಶ್ಯಕತೆ ಬೇಡ.
ನಿಮ್ಮದಾಗಿ ಚಿಕ್ಕಮ್ಮ ಮನೆಗೆ ಬರ್ಲಿ, ಮುಂದೆ ಎಂದಾದ್ರೂ ನನ್ನ ವಿಷಯ ಪ್ರಸ್ತಾಪ ಮಾಡ್ಕೊಂಡ್ರಾಯ್ತು. ವೀರೇಶ್ ನಿರ್ಧಾರದ ಮಾತಿಗೆ ಮಂಜುನಾಥ್ ಸ್ವಲ್ಪ ವಿಚಲಿತರಾದರು, ನನ್ನ ಮಾತು ಕೇಳು ವೀರೂ ನಿನ್ನ ಮದ್ವೆನೂ ನಡೆದುಬಿಡ್ಲಿ ನೋ ಡ್ಯಾಡಿ,ತಂದೆ ಮಗನ ಮದ್ವೆ ಒಂದೇ ಮಂಟಪದಲ್ಲಿ, ಇದಕ್ಕೆ ನನ್ನ ಸಮ್ಮತಿ ಇಲ್ಲ.
ಪ್ರತಿಜ್ಞಾ ಪೂರಕವಾಗಿ ಬಂದ ಮಾತು, ವೀರೇಶ್ ಮಾತಾಡುತ್ತಲೇ ಯಾರನ್ನೂ ಗಮನಿಸದೆ ಮನೆಯಿಂದ ಹೊರ ನಡೆದು ರಸ್ತೆಯ ಕಡೆ ಮುಖ ಮಾಡಿದ. ಶ್ರೀನಿವಾಸ್ ಹಾಗೂ ವೇಣು ಗೇ ಉತ್ತರವೇ ಪ್ರಶ್ನೆಯಾಗಿದ್ದವು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಲೇ ವೀರೇಶ್ ಹೋದುದನ್ನೇ ನೋಡುತ್ತಿದ್ದರು ಮರೆಯಾಗುವ ತನಕ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ……….

