ಮಾರ್ಗಸೂಚಿ ಉಲ್ಲಂಘಿಸಿ ಗ್ಯಾಸ್ ಬಂಕ್ ನಿರ್ಮಾಣ, ಆತಂಕದಲ್ಲಿ ಜನತೆ

News Desk

ಚಂದ್ರವಳ್ಳಿ ನ್ಯೂಸ್ ಹಿರಿಯೂರು :
ನಗರದ ಟಿಬಿ ವೃತ್ತದಿಂದ ಟೌನ್ ಗೆ ಹೋಗುವ  ಮುಖ್ಯ ರಸ್ತೆಯ ಹತ್ತಿರದಲ್ಲಿ ಕಸಬಾ ಹೋಬಳಿಗೆ ಸೇರಿದ ರಿಸನಂ 141 ಫ್ಲಾಟ್ ನಂ 1235/1,1236/2,1241/7 ರಲ್ಲಿ ಎಲ್ ಪಿಜಿ ಗ್ಯಾಸ್ ಬಂಕ್ ನಿರ್ಮಾಣವಾಗುತ್ತಿದ್ದು ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದೆ.

ಸದರಿ ಗ್ಯಾಸ್ ಬಂಕ್ ನಿರ್ಮಾಣ ಸ್ಥಳವು ಮುಖ್ಯ ರಸ್ತೆಯ ಹತ್ತಿರದಲ್ಲೇ ಇದ್ದು ನಿಯಮದ ಪ್ರಕಾರ ಇರಬೇಕಾದ ಅಳತೆಯಷ್ಟು ದೂರದಲ್ಲಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

- Advertisement - 

ಗ್ಯಾಸ್ ಬಂಕ್ ನಿರ್ಮಾಣ ಮಾಡುವಾಗ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳ ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಸಹ ಮುರಿಯಲಾಗಿದೆ. ಸ್ಥಳೀಯ ನಿವಾಸಿಗಳು ಎಲ್ ಪಿಜಿ ಗ್ಯಾಸ್ ಅತ್ಯಂತ ಹಾನಿಕಾರಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದರಿಂದ ಜನವಸತಿ ಕೇಂದ್ರವಾದ ಇಲ್ಲಿ ಗ್ಯಾಸ್ ಬಂಕ್ ತೆರೆಯಲು ಕೊಟ್ಟಿರುವ ಅನುಮತಿ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೀಗ ಗ್ಯಾಸ್ ಬಂಕ್ ನಿರ್ಮಾಣವಾಗುತ್ತಿರುವ ಸ್ಥಳದ ಆಸುಪಾಸು ಸಾವಿರಾರು ವಿದ್ಯಾರ್ಥಿಗಳು ವಾಣಿ ಪ್ರಥಮ ದರ್ಜೆ ಕಾಲೇಜು, ಐಡಿಎಫ್ ಸಿ ಮತ್ತು ಬರೋಡ ಬ್ಯಾoಕ್, ದಿನವೊಂದಕ್ಕೆ ಸಾವಿರಾರು ವಾಹನ ಸಂಚರಿಸುವ ಮುಖ್ಯ ರಸ್ತೆಯಾಗಿದ್ದು ಇದೇ ಜಾಗದಲ್ಲಿ 2018ರಲ್ಲೂ ಸಹ ನಯಾರ ಎನರ್ಜಿ ಎನ್ನುವ ಕಂಪನಿ ಗ್ಯಾಸ್ ಬಂಕ್ ನಿರ್ಮಿಸಲು ಅನುಮತಿ ಕೇಳಿತ್ತು. ಆಗ ಸ್ಥಳ ಪರಿಶೀಲನೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿಗಳು ಸದರಿ ಜಾಗವು ಸರ್ಕಾರದ ಮಾರ್ಗಸೂಚಿ ಪ್ರಕಾರ ಸರಿಯಾದ ಅಳತೆ ಹೊಂದಿಲ್ಲ ಎಂದು ಷರಾ ಬರೆದು ನಿರಾಕ್ಷೇಪಣ ಪತ್ರ ನೀಡಲು ನಿರಾಕರಿಸಿದ್ದರು.

- Advertisement - 

ಆನಂತರ ಮುಖ್ಯ ರಸ್ತೆ ವಿಸ್ತರಣೆಯಾಗಿ ರಸ್ತೆಗೂ ಮತ್ತು ಬಂಕ್ ನಿರ್ಮಾಣದ ಸ್ಥಳಕ್ಕೂ ಇರುವ ಅಂತರ ಮತ್ತಷ್ಟು ಕಡಿಮೆಯಾಯಿತು. ಆದರೆ 2024 ರಲ್ಲಿ ತೆನ್ ಪಾಂಡಿಯನ್ ಎನ್ನುವವರು ಮತ್ತೆ ಗ್ಯಾಸ್ ಬಂಕ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದು ಎಲ್ಲಾ ಇಲಾಖೆಗಳ ಎನ್ ಓ ಸಿ ಕೇಳಿದ್ದು ಉಪ ವಿಭಾಗಾಧಿಕಾರಿಗಳು ಸದರಿ ಜಾಗದ ಎಲ್ಲಾ ನಿವೇಶನಗಳನ್ನು  ಒಟ್ಟುಗೂಡಿಸಿ ಏಕ ನಿವೇಶನ ಮಾಡಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿ ಎಂದು ಹೇಳಿದ್ದರು ಸಹ ಯಾವುದೇ ಮಾರ್ಪಾಟು ಗಳನ್ನು ಮಾಡದೇ ನಿರಾಕ್ಷೇಪಣ ಪತ್ರ ಪಡೆದಿದ್ದಾರೆ ಎಂದು ಸಾರ್ವಜನಿಕರು, ಆಸುಪಾಸಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ ರಸ್ತೆಗೆ 40 ಮೀ ಬಂಕ್ ದೂರವಿರಬೇಕು ಎಂಬ ನಿಯಮ ಗಾಳಿಗೆ ತೂರಿ ಕೇವಲ 22. 50 ಮೀ ಗೆ ಬಂಕ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ದೂರಿದೆ.

ಇದೀಗ ಅಲ್ಲಿನ ನಿವಾಸಿಗಳು, ಸಾರ್ವಜನಿಕರು ನಿಯಮಗಳನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡುತ್ತಿರುವ ಎಲ್ ಪಿಜಿ ಗ್ಯಾಸ್ ಬಂಕ್ ನ ಎನ್ ಓ ಸಿ ರದ್ದುಗೊಳಿಸಿ ಈ ಭಾಗದ ಜನರ ಹಿತದೃಷ್ಟಿ ಕಾಯಬೇಕು ಎಂದು ತಹಶೀಲ್ದಾರ್ ಕಚೇರಿಗೆ ಮನವಿ ಮಾಡಿದ್ದಾರೆ.

ಉದ್ಯಮಿ ನಟರಾಜ್ ಎನ್ನುವವರು ಮಾತನಾಡಿ ಬಂಕ್ ನಿರ್ಮಾಣ ಮಾಡುವಷ್ಟು ನಿಯಮದ ಪ್ರಕಾರ ಜಾಗವಿಲ್ಲದಿದ್ದರೂ ಎನ್ ಓ ಸಿ ನೀಡಲಾಗಿದೆ. ಇಲ್ಲಿ ಗ್ಯಾಸ್ ಬಂಕ್ ಮಾಡುತ್ತಿರುವ ವ್ಯಕ್ತಿ ಕಳೆದ 20 ವರ್ಷಗಳಿಂದ ಅಕ್ರಮವಾಗಿ ಆಟೋಗಳಿಗೆ ಗ್ಯಾಸ್ ತುಂಬುತ್ತಿರುವುದು ಜಗಜ್ಜಾಹೀರು ಆಗಿರುವ ಸತ್ಯ.

ಆತನ ಮೇಲೆ ತಹಶೀಸೀಲ್ದಾರ್, ಆಹಾರ ಇಲಾಖೆಯವರು ದಾಳಿ ನಡೆಸಿ ಕೇಸುಗಳನ್ನು ಹಾಕಿರುವುದು ಸಹ ಎಲ್ಲರಿಗೂ ಗೊತ್ತಿರುವ ಸತ್ಯವೇ. ಆಹಾರ ಇಲಾಖೆಯಿಂದಲೂ ಸಹ ಯಾವುದೇ ಅನುಮತಿ ಪಡೆದಿಲ್ಲ ಎಂದು ಸ್ವತಃ ಆಹಾರ ಇಲಾಖೆಯವರೇ ಹೇಳುತ್ತಿದ್ದಾರೆ. ಇಷ್ಟೆಲ್ಲ ಇದ್ದೂ ಸಹ ಅದ್ಯಾವ ಆಧಾರದ ಮೇಲೆ ಇಲ್ಲಿ ಗ್ಯಾಸ್ ಬಂಕ್ ನಿರ್ಮಾಣಕ್ಕೆ ಅನುಮತಿ ನೀಡಿದರು ಎಂಬ ಸತ್ಯ ಹೊರಬರಬೇಕಿದೆ ಎಂದು ಆಗ್ರಹಿಸಿದರು.

ಆರ್ ಟಿಐ ಕಾರ್ಯಕರ್ತ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿ ಕಾನೂನು ಉಲ್ಲಂಘನೆ ಮಾಡಿ ಬಂಕ್ ನಿರ್ಮಾಣ ಮಾಡಲಾಗುತ್ತಿದೆ. 2018 ರಲ್ಲೇ ಇಲ್ಲಿ ಬಂಕ್ ನಿರ್ಮಾಣಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಈಗ ಮತ್ತೆ ಅನುಮತಿ ಪಡೆದಿದ್ದಾರೆ. ಸುತ್ತಮುತ್ತ ಮನೆಗಳು, ಕಾಲೇಜ್, ಬ್ಯಾoಕ್ ಗಳಿವೆ. ಹಾಗಾಗಿ ಕೂಡಲೇ ಎನ್ ಓ ಸಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

Share This Article
error: Content is protected !!
";