ಗೌರಸಮುದ್ರ ಶ್ರೀಮಾರಮ್ಮ ದೇವಿ ಅದ್ಧೂರಿ ಜಾತ್ರೆಗೆ ಆಗಮಿಸಿದ ಭಕ್ತಸಾಗರ

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿವರ್ಷದಂತೆ ಈ ವರ್ಷವೂ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಕ್ತಿ
, ಶ್ರದ್ದೆಯಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಮಾರಮ್ಮದೇವಿ ದೇವಸ್ಥಾನ ಹಾಗೂ ತುಮಲ ಪ್ರದೇಶದ ಸುತ್ತಮುತ್ತಲು ಭಕ್ತರು ದಂಡೇ ಹರಿದುಬಂದಿತ್ತು. ಜಿಲ್ಲಾಡಳಿತದ ಸೂಚನೆ ಮೇರೆಗೆ ತಾಲ್ಲೂಕು ಆಡಳಿತ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡು ಭಕ್ತರಿಗೆ ತೊಂದರೆಯಾಗದಂತೆ ಎಚ್ಚರಿಕೆವಹಿಸಿದ್ದರಲ್ಲದೆ, ಸಿದ್ದತೆಗಳನ್ನು ಸಹ ಪೂರ್ಣಗೊಳಿಸಿದ್ದರು.

ಕಳೆದ ಹಲವಾರು ದಶಕಗಳಿಂದ ಈ ಭಾಗದಲ್ಲಿ ನೆಲೆಸಿರುವ ಲಕ್ಷಾಂತರ ಭಕ್ತರ ಆರಾಧ್ಯದೈವವಾದ ಸಂಕಷ್ಟಗಳಿಗೆ ಪರಿಹಾರ ನೀಡುವ ಮಾರಮ್ಮ ದೇವಿ ದರ್ಶನ ಪಡೆದು ಭಕ್ತರು ಪುನಿತರಾದರು. ತಮ್ಮ ಆರಾಧ್ಯದೈವವನ್ನು ಕಣ್ತುಂಬಿಕೊಂಡರು.

ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ನಡೆಯುವ ಮೂಲ ಬುಡಕಟ್ಟು ಸಂಸ್ಕೃತಿಕ ಜಾತ್ರೆಗಳಲ್ಲಿ ಒಂದಾದ ಮಾರಮ್ಮ ದೇವಿ ಜಾತ್ರೆ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಭಾಗದಲ್ಲಿದ್ದು, ಆಂಧ್ರವೂ ಸೇರಿದಂತೆ  ಗುಲ್ಬರ್ಗ, ಸುರಪುರ, ಬಳ್ಳಾರಿ ಹಲವಾರು ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಪ್ರತಿವರ್ಷವೂ ಈ ಜಾತ್ರೆಗೆ ಹರಿಕೆ ಹೊತ್ತ ಮೂಲ ಭಕ್ತರು ಎತ್ತಿನ ಗಾಡಿಗಳಲ್ಲಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಿಕೆ ತೀರಿಸಿದರು.

ಮಂಗಳವಾರ ಬೆಳಗಿನಜಾವೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಇಷ್ಟಾರ್ಥಗಳನ್ನು ಪೂರೈಸಿದರು. ಪ್ರತಿವರ್ಷದಂತೆ ಮಧ್ಯಾಹ್ನ ದೇವಸ್ಥಾನದಿಂದ ತುಮಲು ಪ್ರದೇಶಕ್ಕೆ  ಮಾರಮ್ಮ ದೇವಿಯ ಪೆಟ್ಟಿಗೆಯಲ್ಲಿ ಕೂಡಿಸಿ ಮಂಗಳವಾದ್ಯದೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ತುಮಲು ಪ್ರದೇಶಕ್ಕೆ ಕರೆತರಲಾಯಿತು. ಬುಡಕಟ್ಟು ಸಂಪ್ರದಾಯದಂತೆ ಡೊಳ್ಳು, ಕೋಲಾಟ, ಕುಣಿತ, ಬರಿಮೈಗೆ ಚಾಟಿಯಲ್ಲಿ ಹೊಡೆದುಕೊಳ್ಳುವ ಮೂಲಕ ಭಕ್ತಿಯನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಗ್ರಾಮದಿಂದ ತುಮಲು ಪ್ರದೇಶವರೆಗೂ ಸುಮಾರು ಮೂರು ಕಿ.ಮೀ ದೂರದ ರಸ್ತೆಯ ಇಕ್ಕಲಗಳಲ್ಲಿ ಲಕ್ಷಾಂತರ ಭಕ್ತರು ಕೈಮುಗಿದು ತಾವು ಬೆಳೆದ ಬೆಳೆಗಳು, ಈರುಳ್ಳಿ, ಕೋಳಿ, ಹೂ ತೂರುವ ಮೂಲಕ ಹರಿಕೆ ತೀರಿಸಿದರು.  ನಂತರ ತುಮಲು ಪ್ರದೇಶಕ್ಕೆ ಆಗಮಿಸಿ ಇಲ್ಲಿ ಹಾಲಿ ಇರುವ ಮೂಲ ದೇವಸ್ಥಾನದ ಸುತ್ತಲು ಸುತ್ತಿದ ನಂತರ ದೇವಿಯನ್ನು ಅಲ್ಲಿ ಪ್ರತಿಷ್ಠಾಪಿಸಿ ಪೂಜೆ ಕಾರ್ಯಗಳನ್ನು ನಡೆಸಲಾಯಿತು. ಪ್ರತಿವರ್ಷದ ವಾಡಿಕೆಯಂತೆ ದೇವಸ್ಥಾನದ ಮುಂದಿರುವ ಗರಡು ಗಂಭದ ಮೇಲೆ ದೀಪ ಹಚ್ಚಿದ ನಂತರ ಜಾತ್ರೆ ಸಂಪನ್ನವಾಯಿತು. ಕಂಬ ಏರಿ ದೀಪ ಹಚ್ಚುವ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡು ದೀಪಹಚ್ಚಿ ವಾಪಾಸ್ ಮರಳುವಾಗ ಎಲ್ಲರೂ ಒಟ್ಟಿಗೆ ದೇವಿಗೆ ಜೈಯಕಾರ ಹಾಕಿದರು. 

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದಎಂ.ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ಮುಖಂಡರಾದ ಬಾಳೆಮಂಡಿರಾಮದಾಸ್, ಈ.ರಾಮರೆಡ್ಡಿ, ಎನ್.ಓಬಳೇಶ್, ಚನ್ನಗಾನಹಳ್ಳಿ ಮಲ್ಲೇಶ್, ಪ್ರಕಾಶ್‌ರೆಡ್ಡಿ, ನಾರಾಯಣರೆಡ್ಡಿ, ಪಾಪಣ್ಣ, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿ.ಎಸ್.ಮಂಜುನಾಥ, ಡಾ.ಬಿ.ಯೋಗೇಶ್‌ಬಾಬುಎಸ್ಪಿ ರಂಜಿತ್‌ ಕುಮಾರ್ ಬಂಡಾರು, ಎಸಿ ಎಂ.ಕಾರ್ತಿಕ್, ತಹಶೀಲ್ಧಾರ್ ರೇಹಾನ್ ಪಾಷ, ಇಒ ಎಚ್.ಶಶಿಧರ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ದಿವಾಕರ್, ಇನ್ಸ್‌ಪೆಕ್ಟರ್ ಎನ್.ತಿಮ್ಮಣ್ಣ, ರಾಜ ಫಕೃದ್ದೀನ್‌ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಸೇರಿದಂತೆ ಹಲವಾರು ಮುಖಂಡರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸಂಚಾರಿ ವ್ಯವಸ್ಥೆಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಜಾಗ್ರತೆ ವಹಿಸಿದ್ದರು. ಜಾತ್ರೆಯಲ್ಲಿ ಪಿಕ್‌ಪಾಕೇಟ್ ಪ್ರಕರಣ ನಿಯಂತ್ರಿಸಲು ಪೊಲೀಸರು ಶ್ರಮವಹಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ದಯಾನಂದಸ್ವಾಮಿ, ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಕಾವ್ಯ, ಲೋಕೋಪಯೋಗಿ ವಿಭಾಗದ ಎಇಇ ವಿಜಯಭಾಸ್ಕರ್ ರಸ್ತೆ, ಕುಡಿಯುವ ನೀರು ವಿಭಾಗದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಗ್ರಾಮ ಪಂಚಾಯಿತಿ ಸ್ವಚ್ಚತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತು. ಆರೋಗ್ಯ ಇಲಾಖೆ ಅಧಿಕಾರಿ ಎನ್.ಕಾಶಿ, ಸಿಬ್ಬಂದಿ ವರ್ಗ ಸ್ಥಳದಲ್ಲೇ ಮೊಕ್ಕಾಂ ಮಾಡಿ ಯಾವುದೇ ರೋಗ ವ್ಯಾಪಿಸದಂತೆ ಕ್ರಮ ಕೈಗೊಂಡರು. 

 

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon