ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಮಷ್ಟಿಹಿತ ಬಯಸುವ ವ್ಯಕ್ತಿತ್ವದ ಮಹನೀಯರು, ಪುಣ್ಯ ಪುರುಷರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಕಡೆಗಣಿಸಿ ಸಮಾಜದ ಸ್ವಾಸ್ಥ್ಯಕ್ಕೋಸ್ಕರ ಶ್ರಮಿಸಿದ ಫಲ ಸಮಾಜ ಸದೃಢವಾಗಿರಲು ಸಾಧ್ಯವಾಗಿದೆ. ಅಂತಹವರಲ್ಲಿ ತಪೋಧನರಾದ ಈ ಚಿಲುವೆ ರುದ್ರಸ್ವಾಮಿಯವರು ಒಬ್ಬರಾಗಿದ್ದು ಅವರ ಕರ್ಮಭೂಮಿ ಇದಾಗಿದೆ. ಅವರು ಈ ಭಾಗದ ಆರಾಧ್ಯ ದೈವವಾಗಿ ಅದರಲ್ಲಿಯೂ ಕೃಷಿ ವಲಯಕ್ಕೆ ಅವರ ಕೊಡುಗೆ ಅನನ್ಯವಾದದು ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಚಿತ್ರದುರ್ಗ ಬೃಹನ್ಮಠದ ಆಡಳಿತಕ್ಕೊಳಪಟ್ಟ ಚಿಲುಮೆ ರುದ್ರಸ್ವಾಮಿಗಳವರ ಮಠದಿಂದ ಏರ್ಪಡಿಸಿದ್ದ ಕಡೆ ಕಾರ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷಿ- ಕೃತ್ಯ ಕಾಯಕ ಮಾಡುವ ಜನರು ಭೂಮಿತಾಯಿ ಮಕ್ಕಳು. ಮಣ್ಣನ್ನ ನಂಬಿರುವ ನೀವು ಅದಕ್ಕೆ ತಕ್ಕಂತೆ ಚಿಲುಮೆ ಶ್ರೀಗಳು ವ್ಯವಸಾಯಗಾರರ ಒಡನಾಡಿಯಾಗಿ ಬದುಕಿ ಅವರ ನೋವು ನಲಿವಿನಲ್ಲಿ ಭಾಗಿಯಾಗಿ ಸದಾ ಅವರ ಏಳ್ಗೆ ಬಯಸುತ್ತಿದ್ದವರು. ಅಂತಹ ಚಿಲುಮೆರುದ್ರ ಸ್ವಾಮಿಗಳು ತಮ್ಮ ಕತೃತ್ವ ಶಕ್ತಿಯಿಂದ ನೀರನ್ನು ತರಿಸಿದ ಐತಿಹ್ಯ ಅವರ ಮಹಿಮೆಯಿಂದ ತಿಳಿಯುತ್ತದೆ.
ಸತ್ ಸಂಪ್ರದಾಯಗಳನ್ನು ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಚಿಲುಮೆ ರುದ್ರಸ್ವಾಮಿಗಳ ಮೇಲಿನ ಭಕ್ತಿ ,ಪ್ರೀತಿ ಮತ್ತು ನಂಬಿಕೆಯಿಂದ ನೀವುಗಳು ಕೊರೆಯುವ ಚಳಿಯನ್ನು ಲೆಕ್ಕಿಸದೆ ಬಂದಿರುವುದೇ ಸಾಕ್ಷಿ ಎಂದು ಭಕ್ತರ ಭಕ್ತಿಗೆ ಅಭಿಮಾನದಿಂದ ಅಭಿನಂದನೆ ಹೇಳಿದ ನಂತರ ಅಲ್ಲಿನ ಸಾಲಂಕೃತ ದೀಪಕ್ಕೆ ಜ್ಯೋತಿ ಮುಟ್ಟಿಸುವ ಮೂಲಕ ಚಾಲನೆ ನೀಡಿದರು.
ಇದಕ್ಕೂ ಮುನ್ನ ಕ್ಷೇತ್ರದಲ್ಲಿನ ಅಡಿಕೆ ತೋಟ,ಇಲ್ಲಿ ಮುಂದೆ ಮತ್ತೆ ಯಾವ ಬೆಳೆಗಳನ್ನು ಹಾಕಿ ಬೆಳೆಯಬಹುದೆಂಬ ಚರ್ಚೆಯನ್ನು ಅಲ್ಲಿನ ಟ್ರಸ್ಟ್ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿದರು. ನಂತರ ಕಲ್ಯಾಣ, ಮಂಟಪ ದಾಸೋಹ ಭವನ, ಯಾತ್ರಿ ನಿವಾಸಕ್ಕೂ ಭೇಟಿ ನೀಡಿದರು. ಆನಂತರ ಸೇರಿದ ಸಾವಿರಾರು ಜನರಿಗೆ ಏರ್ಪಡಿಸಿದ್ದ ಅನ್ನದಾಸೋಹಕ್ಕೆ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ಟ್ರಸ್ಟ್ ಸಮಿತಿ ಉಪಾಧ್ಯಕ್ಷ ಓಬಣ್ಣ, ಕಾರ್ಯದರ್ಶಿ ಅಶೋಕ್, ಕೋಶಾಧಿಕಾರಿ ತಿಪ್ಪಣ್ಣ, ಖಜಾಂಚಿ ರವಿಚಂದ್ರ, ಸದಸ್ಯರುಗಳಾದ ಸಂತೋಷ್, ಮಂಜುನಾಥ್, ಟಿ.ಚಲ್ಮೇಶ, ರಾಜೇಶ್ ರೆಡ್ಡಿ, ಚೆಲ್ಮೇಶ್, ರಾಜಣ್ಣ, ಪ್ರಕಾಶ್, ಲೋಕೇಶ್, ತಿರುಮಲೇಶ್, ಮಹೇಶ್ ಮತ್ತಿತರರು ಭಾಗವಹಿಸಿದ್ದರು.