ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಅವರು ನೀಡಿದ್ದ ‘ಗ್ಯಾರಂಟಿ‘ಯಂತೆ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ‘ಗಿಗ್‘ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನಿಸಿದ್ದು, ಇದಕ್ಕೆ ರಾಹುಲ್ ಗಾಂಧಿ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು. ಚುನಾವಣಾ ಪ್ರಚಾರದ ಸಮಯದಲ್ಲೂ ಡೆಲಿವರಿ ಬಾಯ್ ಗಳೊಂದಿಗೆ ಸಂವಾದ ನಡೆಸಿ, ಕರ್ನಾಟಕದಲ್ಲಿ ಗಿಗ್ ಕಲ್ಯಾಣ ಮಂಡಳಿ ಸ್ಥಾಪಿಸುವುದಾಗಿ ಘೋಷಿಸಿದ್ದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಅವರು ಕರ್ನಾಟಕದಲ್ಲಿ ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪಿಸುವ ಕುರಿತು ಮಾಹಿತಿ ನೀಡಿದರು ಎಂದು ಕಾಂಗ್ರೆಸ್ ತಿಳಿಸಿದೆ.