ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಹಿರಿಯ ರಾಜಕೀಯ ಮುತ್ಸದ್ದಿ ದಿ. ಸಿ. ಡಿ. ಸತ್ಯನಾರಾಯಣ ಗೌಡರ ಪುತ್ರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಗೆಲುವು ಸಾಧಿಸಿದ್ದಾರೆ.
ದಿ. 16.2.2025ರಂದು ಬೆಂಗಳೂರು ವಕೀಲರ ಸಂಘದ 25–28ರ ಅವಧಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ತೀರಾ ಹಣಾಹಣಿಯ ಪ್ರಬಲ ಪೈಪೋಟಿ ಮದ್ಯೆ ಸಿ. ಎಸ್. ಗಿರೀಶ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಿಂದೆ ವಕೀಲರ ಸಂಘದಲ್ಲಿ ಎರಡು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಗಿರೀಶ ರವರು ತಮ್ಮ ಸರಳತೆ ಹಾಗೂ ಜನಪ್ರಿಯತೆಯಿಂದಾಗಿ ಉಪಾಧ್ಯಕ್ಷರಾಗಿ ವಿಶೇಷವೆಂದೆ ಹೇಳಬಹುದು.
ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಗಿರೀಶ್ ಕುಮಾರ್ ರವರನ್ನು ವಕೀಲ ಮಿತ್ರರು ಹಾಗೂ ಅಪಾರ ಸಂಖ್ಯೆಯ ಸ್ನೇಹಿತರ ಬಳಗ ಅಭಿನಂದಿಸಿದ್ದಾರೆ. ಈ ವೇಳೆ ಗಿರೀಶ್ ರವರು ಪತ್ರಿಕಾ ಹೇಳಿಕೆ ನೀಡಿ ವಕೀಲರ ಸಂಘದ ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವುದು ನನಗೆ ದೊರೆತ ದೊಡ್ಡ ಗೌರವ. ಈ ಸ್ಥಾನವನ್ನು ಗೌರವದಿಂದ ಮತ್ತು ಜವಾಬ್ದಾರಿಯುತವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ.
ನಮ್ಮ ವಕೀಲರ ಕಷ್ಟ ಸಂಕಷ್ಟಗಳಿಗೆ ದನಿಯಾಗಿ ಅವರ ಹಕ್ಕುಗಳ ಮತ್ತು ಹಿತರಕ್ಷಕನಾಗಿ ಸದಾ ನಿಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಗೆಲುವಿನಲ್ಲಿ ಎಲ್ಲಾ ವಕೀಲರ ಬೆಂಬಲದ ಜೊತೆಗೆ ದೊಡ್ಡಬಳ್ಳಾಪುರ ವಕೀಲರ ಸಹಕಾರವನ್ನು ಮರೆಯುವಂತಿಲ್ಲ. ಜೊತೆಗೆ ನನ್ನ ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಮಸ್ತ ವಕೀಲ ಬಂದುಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಗಿರೀಶ್ ಕುಮಾರ್ ಹೇಳಿದ್ದಾರೆ.

