ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಈರುಳ್ಳಿ ಬೆಳೆ ನಷ್ಟಕ್ಕೊಳಗಾಗಿರುವ ಎಲ್ಲಾ ರೈತರಿಗೆ ಒಂದು ಎಕರೆಗೆ ಒಂದು ಲಕ್ಷ ರೂ.ಗಳ ಪರಿಹಾರ ಸೇರಿದಂತೆ ಬೆಂಬಲ ಬೆಲೆ ನಿಗಧಿಪಡಿಸಿ ತಕ್ಷಣವೆ ಖರೀಧಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಬೆಳೆವಿಮೆ ಮಧ್ಯಂತರ ಪರಿಹಾರ ಕೊಡುವಂತೆ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಜಿಲ್ಲೆಗೊಂದು ಇನ್ಸುರೆನ್ಸ್ ಆಫೀಸ್ ತೆರೆಯಬೇಕೆಂಬ ನಮ್ಮ ಬೇಡಿಕೆಗೆ ಆಳುವ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಮೊಳಕಾಲ್ಮುರು ಚಳ್ಳಕೆರೆ ತಾಲ್ಲೂಕಿನಲ್ಲಿ ಶೇಂಗಾ, ಈರುಳ್ಳಿ ಬೆಳೆಗಳು ನಾಶವಾಗಿದೆ. ಸೂರ್ಯಕಾಂತಿ, ಮೆಕ್ಕೆಜೋಳವನ್ನು ಬೆಂಬಲ ಬೆಲೆಗೆ ಖರೀಧಿಸುವಂತೆ ಒತ್ತಾಯಿಸುತ್ತ ಬರುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೇಂಗಾ, ತೊಗರಿ, ರಾಗಿ, ಸಾವೆ, ಇತರೆ ಬೆಳೆಗಳಿಗೆ ಒಂದು ಎಕರೆಗೆ ತಲಾ ೫೦ ಸಾವಿರ ರೂ.ಗಳ ಪರಿಹಾರ ಕೊಡಬೇಕು.
ಕೃಷಿ, ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ ಕಛೇರಿಯ ಕೆಲಸಗಳನ್ನು ಬದಿಗೊತ್ತಿ ರೈತರ ಜಮೀನುಗಳಿಗೆ ಹೋಗಿ ಬೆಳೆ ಸಮೀಕ್ಷೆ ನಡೆಸಬೇಕು. ರೈತರು ಬ್ಯಾಂಕ್, ಫೈನಾನ್ಸ್‌ಗಳಲ್ಲಿ ಪಡೆದಿರುವ ಸಾಲ ಮನ್ನಾ ಆಗಬೇಕು.
೨೦೨೬ ನೇ ಮುಂಗಾರು ಸಮಯಕ್ಕೆ ನಷ್ಠಕ್ಕೆ ಒಳಗಾಗಿರುವ ರೈತರಿಗೆ ಉಚಿತ ಬೀಜ, ಗೊಬ್ಬರಗಳನ್ನು ವಿತರಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಹಣವನ್ನು ಶೀಘ್ರವೇ ಬಿಡುಗಡೆಗೊಳಿಸಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು.
ಭರಮಸಾಗರ ಹೋಬಳಿ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರ ಪಂಪ್‌ಸೆಟ್‌ಗಳಿಗೆ ೭ ಗಂಟೆ ವಿದ್ಯುತ್ ಪೂರೈಕೆಯಾಗಬೇಕು.
ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಮಿತಿಯಿಲ್ಲದೆ ಖರೀಧಿಸಲು ಕೇಂದ್ರ ತೆರೆದು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗ ಹೋಬಳಿ ಕಲ್ಲವ್ವನಾಗತಿಹಳ್ಳಿ ಗಣಿಭಾದಿತ ಪ್ರದೇಶವಾಗಿದ್ದು, ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಹೆಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡಿ ಹವಾಮಾನ ವೈಪರೀತ್ಯ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಮುಂಗಾರು ಹಂಗಾಮಿನ ಶೇಂಗಾ, ತೊಗರಿ, ಮೆಕ್ಕೆಜೋಳ, ಸಾವೆ, ರಾಗಿ ಮುಂತಾದ ಬೆಳೆಗಳು ನಾಶವಾಗಿರುವುದರಿಂದ ಬೆಳೆ ವಿಮೆ ಪಾವತಿಸಿರುವ ರೈತರಿಗೆ ಶೇ. ೨೫ ರ ಪ್ರಮಾಣ ಮಧ್ಯಂತರ ಪರಿಹಾರವನ್ನು ಅಕ್ಟೋಬರ್ ತಿಂಗಳೊಳಗೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಹೆಬ್ಬೂರು ರಾಜು ನಿಂಗಪ್ಪ, ಹೇಮರೆಡ್ಡಿ, ಎಂ.ಮಹೇಶ್, ಆರ್.ಮಾರುತಿ, ಹೊನ್ನೂರು ಮುನಿಯಪ್ಪ, ವಿರುಪಾಕ್ಷಪ್ಪ, ಕಬ್ಬಿಗೆರೆ ಕಾಂತರಾಜ್, ಬಾಗೆನಾಳ್ ಕೊಟ್ರಬಸಪ್ಪ, ಪಿ.ಪಿ.ಮರುಳಸಿದ್ದಯ್ಯ ಹೆಚ್.ನಾಗೇಂದ್ರಪ್ಪ, ಹರಳಯ್ಯ, ಸಿದ್ದಬಸಪ್ಪ, ನಿರಂಜನಮೂರ್ತಿ, ಮಂಜುನಾಥ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

