“ಅನ್ನ ಕೊಡೋ ರೈತನ ಮಗನಿಗೆ ಹೆಣ್ಣು ಸಿಗದಿದ್ದರೆ, ಅನ್ನ ಕೊಡೋರು ಯಾರು?”

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನ ಕೊಡೋ ರೈತನ ಮಗನಿಗೆ ಹೆಣ್ಣು ಸಿಗದಿದ್ದರೆ, ನಾಳೆ ಅನ್ನ ಕೊಡೋರು ಯಾರು?”.ರೈತನ ಕೈಯಲ್ಲಿ ಅನ್ನ ಇದ್ದರೂ, ಅವನ ಮಗನ ಕೈಯಲ್ಲಿ ಮದುವೆ  ಯಾಕಿಲ್ಲ?”. ಕೃಷಿ ಮಾಡುವವನು ಅಯೋಗ್ಯನಾ? ಅಥವಾ ನಮ್ಮ ಮನೋಭಾವವೇ ಹೀನಾಯವಾ?”.

ರೈತನ ಮಗನಿಗೆ ಮಗಳು ಕೊಡದ ಸಮಾಜ, ತನ್ನ ಭವಿಷ್ಯ ಉಳಿಸಿಕೊಳ್ಳುತ್ತದೆಯಾ?”. ಅನ್ನದಾತನ ಮನೆಗೆ ಅಳಿಯ ಬರದಿದ್ದರೆ, ಸಮಾಜಕ್ಕೆ ಮುಂದಿನ ಪೀಳಿಗೆ ಎಲ್ಲಿ?”. ನಗರದ ಉದ್ಯೋಗವೇ ಗೌರವವಾ? ಮಣ್ಣಿನಲ್ಲಿ ದುಡಿಯೋವನಿಗೆ ಮೌಲ್ಯ ಇಲ್ಲವೇ?”. ರೈತನ ಮಗ ಮದುವೆಯಾಗದಿದ್ದರೆ, ಹೊಲದಲ್ಲಿ ಕೆಲಸ ಮಾಡುವವರು ಯಾರು?”. ಇಂದು ರೈತನಿಗೆ ಮಗಳು ಕೊಡದ ಸಮಾಜ, ನಾಳೆ ಅನ್ನಕ್ಕಾಗಿ ಯಾರನ್ನು ಕೇಳುತ್ತದೆ?”. ಕೈಯಲ್ಲಿ ಮಣ್ಣು ಇದ್ದದ್ದರಿಂದ ರೈತನ ಮಗ ಹೀನನಾ?”. ರೈತನ ಬದುಕು ಕಷ್ಟ ಅಂತ ದೂರವಿದ್ದರೆ, ನಮ್ಮ ಬದುಕು ಸುಲಭವಾಗುತ್ತದೆಯಾ.

- Advertisement - 

ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ಸಮಾಜದಲ್ಲಿ ಮೌನವಾಗಿ ಬೆಳೆಯುತ್ತಿರುವ ಒಂದು ದೊಡ್ಡ ಸಂಕಷ್ಟ ಇದೆ ರೈತರ ಮಕ್ಕಳಿಗೆ ಮದುವೆ ಆಗದಿರುವುದು. ಇದು ಕೇವಲ ವೈಯಕ್ತಿಕ ಸಮಸ್ಯೆಯಲ್ಲ, ನಮ್ಮ ಕೃಷಿ ವ್ಯವಸ್ಥೆಯ ಭವಿಷ್ಯವನ್ನೇ ಪ್ರಶ್ನಿಸುವ ಗಂಭೀರ ಸಾಮಾಜಿಕ ಸಮಸ್ಯೆ.

ಒಂದು ಕಾಲದಲ್ಲಿ ರೈತನ ಮನೆಗೆ ಮಗಳಾದರೆ ಗೌರವಎನ್ನುವ ಮನೋಭಾವ ಇತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೃಷಿ ಮಾಡುತ್ತಿರುವ ಯುವಕರನ್ನು ಮದುವೆಗೆ ಯೋಗ್ಯರೆಂದು ನೋಡದೇ, ನಗರ ಉದ್ಯೋಗ, ವೇತನ, ಸೌಕರ್ಯಗಳನ್ನು ಆಧಾರ ಮಾಡಿಕೊಂಡು ನಿರ್ಧಾರ ಮಾಡಲಾಗುತ್ತಿದೆ. ಅದಕ್ಕಿಂತಲೂ ವಿಪರ್ಯಾಸವೇನೆಂದರೆ ರೈತನ ಮಗಳನ್ನೇ ಮತ್ತೊಬ್ಬ ರೈತನ ಮಗನಿಗೆ ಕೊಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement - 

ಇದರಿಂದ ಏನಾಗುತ್ತಿದೆ?
ಇಂದು ನೂರಕ್ಕೆ ಶೇ.60ಕ್ಕೂ ಹೆಚ್ಚು ಕೃಷಿ ಮಾಡುತ್ತಿರುವ ಯುವಕರು ಹೆಣ್ಣು ಸಿಗದೆ ಮದುವೆ ವಯಸ್ಸನ್ನೇ ಮೀರಿ ಹೋಗುತ್ತಿದ್ದಾರೆ. ಮನಸ್ಸಿನ ಒತ್ತಡ
, ಏಕಾಂತ, ಸಾಮಾಜಿಕ ಹಿಂಜರಿಕೆ, ಇವುಗಳು ನಿಧಾನವಾಗಿ ಅವರ ಬದುಕನ್ನು ಕತ್ತಲೆಗೆ ತಳ್ಳುತ್ತಿವೆ. ಇದು ವ್ಯಕ್ತಿಗತ ದುರಂತ ಮಾತ್ರವಲ್ಲ, ಕೃಷಿಯ ಮುಂದಿನ ಪೀಳಿಗೆಯೇ ಕುಸಿಯುವ ಎಚ್ಚರಿಕೆಯ ಗಂಟೆ.

ನಿಜವಾಗಿ ಯೋಚಿಸಿದರೆ ಕೃಷಿ ಮಾಡುವವನೇ ನಿಜವಾದ ಹೀರೋ ಅಲ್ಲವೇ?. ಅವನು ಬೆಳೆದ ಧಾನ್ಯವಿಲ್ಲದೆ ನಗರಗಳ ಬೆಳಕು ಏನು ಮಾಡುತ್ತದೆ?. ಅವನು ಬೆಳೆದ ಅನ್ನವಿಲ್ಲದೆ ಕೋಟಿ ಸಂಬಳದ ಕೆಲಸಕ್ಕೂ ಅರ್ಥವೇನು?.

ಅನ್ನದಾತಎಂಬ ಪದ ಕೇವಲ ಗೌರವದ ಮಾತಲ್ಲ ಅದು ನಮ್ಮ ಬದುಕಿನ ಮೂಲ. ಆದರೆ ನಾವು ಮಾಡುತ್ತಿರುವ ತಪ್ಪೇನು ಗೊತ್ತಾ?. ಕೃಷಿಯನ್ನು ಹೀನಾಯವಾಗಿ ನೋಡುವ ಮನೋಭಾವ.

ಕೈ ಮಣ್ಣಿನಲ್ಲಿ ಕೆಲಸ ಮಾಡುತ್ತಾನೆ ಎಂದು ಅವನನ್ನು ಕಡಿಮೆ ಅಂದಾಜು ಮಾಡುವುದು. ಇದು ಕೇವಲ ಅನ್ಯಾಯವಲ್ಲ ನಮ್ಮ ಅಸ್ತಿತ್ವದ ವಿರುದ್ಧದ ನಡೆ. ಇದಕ್ಕೆ ಪರಿಹಾರ ಏನು?

ಮೊದಲು ಸಮಾಜದ ಮನೋಭಾವ ಬದಲಾಯಬೇಕು. ಕೃಷಿ ಎಂದರೆ ಹಿಂದುಳಿತವಲ್ಲ, ಅದು ಭವಿಷ್ಯದ ಶಕ್ತಿ ಎಂಬ ಅರಿವು ಬರಬೇಕು. ಪೋಷಕರು ತಮ್ಮ ಮಕ್ಕಳಿಗೆ ಕೃಷಿಯ ಗೌರವವನ್ನು ತಿಳಿಸಬೇಕು.

ರೈತರ ಕುಟುಂಬಗಳು ಕೂಡ ತಮ್ಮ ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸುವತ್ತ ಗಮನ ಕೊಡಬೇಕು. ಶಿಕ್ಷಣ, ತಂತ್ರಜ್ಞಾನ, ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.

ಸರ್ಕಾರ ಕೂಡ ಕೃಷಿಕರ ಆದಾಯ, ಭದ್ರತೆ, ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಗಟ್ಟಿಯಾದ ನೀತಿಗಳನ್ನು ಜಾರಿಗೊಳಿಸಬೇಕು. ಅತ್ಯಂತ ಮುಖ್ಯವಾಗಿ ಮದುವೆ ಎನ್ನುವುದು ಉದ್ಯೋಗದ ಮೇಲೆ ಮಾತ್ರ ನಿಲ್ಲಬಾರದು. ಮಾನವೀಯತೆ, ಜವಾಬ್ದಾರಿ, ಕುಟುಂಬ ಮೌಲ್ಯಗಳು, ಇವೇ ನಿಜವಾದ ಆಧಾರವಾಗಬೇಕು.

ಇಂದು ರೈತನ ಮಗ ಮದುವೆಯಾಗದೆ ಉಳಿದರೆ, ನಾಳೆ ಹೊಲ ಖಾಲಿಯಾಗುತ್ತದೆ. ಹೊಲ ಖಾಲಿಯಾದರೆ ಊಟ ಖಾಲಿಯಾಗುತ್ತದೆ. ಇದು ಕೇವಲ ರೈತನ ಸಮಸ್ಯೆಯಲ್ಲ, ಇಡೀ ಸಮಾಜದ ಭವಿಷ್ಯದ ಪ್ರಶ್ನೆ. ಬನ್ನಿ, ನಾವು ಯೋಚನೆ ಬದಲಾಯಿಸೋಣ ರೈತನನ್ನು ಕೇವಲ ಬೆಳೆ ಬೆಳೆಸುವವನಾಗಿ ಅಲ್ಲ, ಬದುಕು ಬೆಳೆಸುವವನಾಗಿ ನೋಡೋಣ. ಅವನ ಕೈಯಲ್ಲಿರುವ ಮಣ್ಣು ನಮ್ಮ ಜೀವಾಳ, ಆ ಕೈಗೆ ಗೌರವ ಕೊಡೋಣ.

ರೈತನ ಮನೆಗೆ ಮಗಳು ಕೊಡುವುದು ಹೆಮ್ಮೆ, ರೈತನ ಮಗನಿಗೆ ಮಗಳು ನೀಡುವುದು ಗೌರವ. ಈ ಮನೋಭಾವ ಮತ್ತೆ ಜೀವಂತವಾಗಬೇಕು. ಅನ್ನದಾತನಿಗೆ ಬೆಲೆ ಕೊಡದ ಸಮಾಜ, ತನ್ನದೇ ಭವಿಷ್ಯವನ್ನು ಕಳೆದುಕೊಳ್ಳುತ್ತದೆ.
ಇನ್ನೂ ಸಮಯ ಇದೆ
ಗೌರವದಿಂದ ರೈತನನ್ನು ನೋಡುವ ಮನಸ್ಸು ಬೆಳೆಸೋಣ.
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.

 

 

 

Share This Article
error: Content is protected !!
";