ಮಾನಸಿಕ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ- ನ್ಯಾ. ರೋಣ ವಾಸುದೇವ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡು ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸಕಾಲದಲ್ಲಿ ಆರೈಕೆ ಹಾಗೂ ಸೇವೆಯನ್ನು ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಆಸ್ಪತ್ರೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರದಂದು ಹಮ್ಮಿಕೊಂಡಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಉದ್ಘಾಟನೆ ಸಮಾರಂಭದಲ್ಲಿ, ಮಾನಸಿಕ ಆರೋಗ್ಯ ದೂರುಗಳನ್ನು ಸ್ವೀಕರಿಸುವ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ನಗರದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿ ಕಾರ್ಯರಂಭ ಮಾಡಿದೆ.  ಈ ಘಟಕದ ಮೂಲ ಉದ್ದೇಶ ಜಿಲ್ಲಾದ್ಯಾಂತ ಮಾನಸಿಕ ಆರೋಗ್ಯವನ್ನು ಕಳೆದುಕೊಂಡಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ನೆರವು ನೀಡುವುದಾಗಿದೆ.

ಚಿಕಿತ್ಸೆ ನೀಡಿದ ಮೇಲೆಯೂ ಗುಣಮುಖರಾಗದ ವ್ಯಕ್ತಿಗಳಿಗೆ ಮಾನಸಿಕ ಸ್ವಾಸ್ಥ್ಯ ಪ್ರಮಾಣ ಪತ್ರ ನೀಡಬೇಕು. ಪ್ರಮಾಣ ಪತ್ರ ಪಡೆದವರಿಗೆ ಸರ್ಕಾರದ ಯೋಜನೆಯ ಲಾಭ ಸಿಗಬೇಕು.

- Advertisement - 

ಸಾರ್ವಜನಿಕರು ಮಾನಸಿಕ ಆರೋಗ್ಯ ಕೇಂದ್ರದಲ್ಲಿ ದೂರುಗಳನ್ನು ಸಲ್ಲಿಸಬಹುದು. ಕುಂದು ಕೊರತೆಗಳು ಹಾಗೂ ದೂರುಗಳು ಸಂಬಂದಪಟ್ಟ ಅಧಿಕಾರಿಗಳು ಇವುಗಳು ನಿವಾರಿಸುವರು. ತಮ್ಮ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಯಾರಾದರೂ ಕಂಡು ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು  ಅವರ ಚಿಕಿತ್ಸೆಗೆ ಸಹಕರಿಸಬೇಕು ಎಂದು ರೋಣ ವಾಸುದೇವ್ ಹೇಳಿದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿಯ ಅಧ್ಯಕ್ಷ  ವೀರಣ್ಣ ಸೋಮಶೇಖರ್ ಮಾತನಾಡಿ ಮಾನಸಿಕ ಅಸ್ವಸ್ಥತೆ ಹಾಗೂ ಮಾನಸಿಕ ಆರೋಗ್ಯ ಸಂರಕ್ಷಣಾ ಕಾಯ್ದೆಯಡಿ ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿಯನ್ನು ರಚನೆ ಮಾಡಲಾಗಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದ್ದು ಸಾರ್ವಜನಿಕರು ಮಾನಸಿಕ ಆರೋಗ್ಯ ಸೇವೆ ಪಡೆಯಬಹುದು.
ಈ ಕಾಯ್ದೆಯ ಉದ್ದೇಶ ಮಾನಸಿಕ ಅಸ್ವಸ್ಥೆತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಟ್ಟು, ಅವರನ್ನು ಮುಖ್ಯವಾಹಿನಿಗೆ ತರುವುದು. ಅವರ ಆರೋಗ್ಯ ಮತ್ತು ಹಕ್ಕುಗಳನ್ನು ಸಂರಕ್ಷಣೆ ಮಾಡುದಾಗಿದೆ.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ ಮಾನಸಿಕ ಅಸ್ವಸ್ಥರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು. ಇವರು ಸಹ ಮನೋವೈದ್ಯಾಧಿಕಾರಿಗಳಿಂದ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯ ವೃದ್ಧಿಸಿಕೊಂಡು ಸಮಾಜದಲ್ಲಿ ಎಲ್ಲರೊಡನೆ ಬೆರೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಪಿ ರವೀಂದ್ರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ನಾಗರಾಜ್, ಜಿಲ್ಲಾಸ್ಪತ್ರೆಯ ಮನೋವೈದ್ಯೆ ಡಾ. ಪಾರ್ವತಿ, ಹಾಯ್ಕಲ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀ ಹರ್ಷ ಇದ್ದರು.

 

 

 

Share This Article
error: Content is protected !!
";