ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಮಾ.೧೧ ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕುಮಾರ್ ಸಮತಳ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಾಗುವಳಿ ಪತ್ರಕ್ಕಾಗಿ ೩೪ ಲಕ್ಷಕ್ಕೂ ಹೆಚ್ಚು ಅರ್ಜಿಗಳು ರಾಜ್ಯದಲ್ಲಿ ಸಲ್ಲಿಕೆಯಾಗಿವೆ. ಅನಾದಿ ಕಾಲದಿಂದಲೂ ಜೀವನೋಪಾಯಕ್ಕಾಗಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕಾಗಿರುವುದರಿಂದ ಕಾನೂನು ತೊಡಕುಗಳನ್ನು ನಿವಾರಿಸಿ ಸಾಗುವಳಿ ಪತ್ರಗಳನ್ನು ಕೊಡುವಂತೆ ಒತ್ತಾಯಿಸಿ ಮಾ.೧೧ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಭೂ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗುವುದು.

- Advertisement - 

೧೨ ಮತ್ತು ೧೩ ರಂದು ಗಾಂಧಿ ಭವನದಲ್ಲಿ ನಡೆಯಲಿರುವ ಜನ ಚಳುವಳಿಗಳ ಬಜೆಟ್ ಅಧಿವೇಶನದಲ್ಲಿ ಭೂ ಹಕ್ಕಿನ ಪ್ರತಿಪಾದನೆಯಾಗಬೇಕು. ಉದ್ಯಮಿಗಳು, ಬಂಡವಾಳಶಾಹಿಗಳಿಗೆ ನೀಡಲು ಸರ್ಕಾರದಲ್ಲಿ ಭೂಮಿಯಿದೆ. ಅದೆ ತುಂಡು ಭೂಮಿಗಳನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರಿಗೆ ಹಕ್ಕುಪತ್ರ ಕೊಡಲು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಕುಮಾರ್ ಸಮತಳ ಈ ಬಾರಿ ಇತ್ಯರ್ಥವಾಗದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಮರಿಯಪ್ಪ ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್ ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಭೂಮಿಯನ್ನೆ ನಂಬಿ ಬದುಕುತ್ತಿರುವವರಿಗೆ ಸಾಗುವಳಿ ಪತ್ರ ವಿತರಿಸಬೇಕು. ೩೪ ಲಕ್ಷ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವ ಸರ್ಕಾರ ಉಳುಮೆ ಮಾಡುತ್ತಿರುವ ಬಡವರ ಭೂಮಿಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆಪಾದಿಸಿದರು.

- Advertisement - 

ಸತ್ಯಪ್ಪ ಮಲ್ಲಾಪುರ ಮಾತನಾಡಿ ಜಿಲ್ಲೆಯಿಂದ ಸಾಗುವಳಿ ಪತ್ರಕ್ಕಾಗಿ ೭೦ ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್‌ನಲ್ಲಿ ಸಾಗುವಳಿ ಪತ್ರ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಏಪ್ರಿಲ್‌ನಿಂದ ಅನಿರ್ಧಿಷ್ಟಾವಧಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದೆಂದರು.

ಹನುಮಂತಪ್ಪ ಗೋನೂರು, ರಮೇಶ್ ಸಂಕ್ರಾಂತಿ, ಸಿದ್ದರಾಜು, ಶ್ರೀಮತಿ ಬಂಗಾರಕ್ಕನಹಳ್ಳಿ, ಅಬ್ಬಿನಹೊಳೆ ತಿಪ್ಪೇಸ್ವಾಮಿ, ಪಾರ್ವತಮ್ಮ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

 

 

 

 

Share This Article
error: Content is protected !!
";