ದೇವರು-ಅಭಿವೃದ್ಧಿ ಮತ್ತು ನಾವು-ನಮ್ಮ ಕರ್ತವ್ಯ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವರು-ಅಭಿವೃದ್ಧಿ ಮತ್ತು ನಾವು-ನಮ್ಮ ಕರ್ತವ್ಯ…….ಭೂಮಿಯ ಮೇಲೆ ನಾವಿರುವುದು ಸುಮಾರು 750 ಕೋಟಿ ನರಮಾನವರು, ವಿಶಾಲವಾದ ಆಕಾಶ, ಆದರೆ, ಅನೇಕರಿಗಿಲ್ಲ ಸೂರು……..

ವಿಪುಲವಾದ ನೀರು, ಆದರೆ, ಕುಡಿಯುವ ನೀರಿಗೆ ಹಾಹಾಕಾರ. ಬೃಹತ್  ಭೂಮಿಕಾಡು, ಕೃಷಿ, ಎಲ್ಲವೂ ಇದೆ, ಆದರೆ, ಹೊಟ್ಟೆಗಿಲ್ಲ ಸರಿಯಾದ ಊಟ. ಊಹೆಗೂ ನಿಲುಕದ  ಸೂರ್ಯ ಶಾಖ ಆದರೆ, ವಿದ್ಯುತ್ ಅಭಾವ. ಸರ್ವಾಂತರ್ಯಾಮಿ ಗಾಳಿ, ಆದರೆ, ಶುದ್ಧ ಗಾಳಿಗೂ ಪರದಾಟ. ಇದೇ ಅಭಿವೃದ್ಧಿ, ಇದೇ ನಾಗರಿಕತೆ.

ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌‌‌‌‌‌‌‌‌‌‌, ಹಾರ್ವರ್ಡ್‌, ಐಐಟಿಐಐಎಮ್, ವಿಶ್ವವಿದ್ಯಾಲಯಗಳು, ಆದರೂ ಮತಿಗೆಟ್ಟವರಿಗಿಲ್ಲ ಕೊರತೆ. ಕ್ಷಣಾರ್ಧದಲ್ಲಿ ಇಡೀ ಮನುಕುಲದ ನಾಶಕ್ಕಿವೆ ಬಾಂಬುಗಳು, ಆದರೂ, ಮನುಷ್ಯನ ರಕ್ಷಣೆಗಿಲ್ಲ ದಾರಿಗಳು.

ಮಂಗಳ ಗ್ರಹ ಹತ್ತಿರವಾಗುತ್ತಿದೆ, ಆದರೆ, ನಮ್ಮ ಬಡ ಹಳ್ಳಿಗಳು ದೂರವಾಗುತ್ತಿವೆ. ರಸ್ತೆಗಳು ಸುಂದರವಾಗುತ್ತಿವೆ,  ಆದರೆ, ಅಪಘಾತಗಳು ನಿರಂತರವಾಗುತ್ತಿವೆ. ಆಸ್ಪತ್ರೆಗಳು ಹ್ಯೆಟೆಕ್ ಗಳು, ಮಲ್ಟಿಸ್ಪೆಷಾಲಿಟಿಗಳು ಆಗುತ್ತಿವೆ. ಆದರೆ, ಆರೋಗ್ಯ ಹದಗೆಡುತ್ತಿದೆ, ಸಾವು ಏರುತ್ತಿದೆ.

ಬೆಳೆಯುತ್ತಿವೆ ಶಿಕ್ಷಣ ಸಂಸ್ಥೆಗಳು, ಆದರೆ, ಕೊಳೆಯುತ್ತಿವೆ ನಮ್ಮ ಮನಸ್ಸುಗಳು. ಎಲ್ಲರನ್ನೂ ಬೆಸೆಯುತ್ತಿವೆ ಸಾಮಾಜಿಕ ಜಾಲತಾಣಗಳು, ಆದರೆ ಕೊರಗುತ್ತಿವೆ ಮನಸ್ಸುಗಳು ಅನಾಥ ಪ್ರಜ್ಞೆಯಲ್ಲಿ. ಪ್ರೀತಿಗಾಗಿ ಹಾತೊರೆಯುವ ಮನಸ್ಸುಗಳ ನಡುವೆ ವಿರಹಿಗಳ ಸಂಖ್ಯೆ ಏರುತ್ತಲೇ ಇದೆ. ಇದೇ ಅಭಿವೃದ್ಧಿ, ಇದೇ ನಾಗರಿಕತೆ.

ಮತ್ತೊಮ್ಮೆ ನಮ್ಮನ್ನು ನಾವು ಪುನರ್ರೂಪಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಯೋಚಿಸೋಣ. ಏಕೆಂದರೆ ಇದು ನಮ್ಮದೇ ಸಮಾಜ, ನಮ್ಮ ರಕ್ಷಣೆಗಾಗಿ ಬೇರೆ ಯಾರೂ ಇಲ್ಲ, ಆ ದೇವರು ಸಹ.

ಓಂ, ದೇವರೇ…….ತಿನ್ನುವ ಅನ್ನ ನಿನ್ನದಂತೆ. ಕುಡಿಯುವ ನೀರು ನಿನ್ನದಂತೆ. ಉಸಿರಾಡುವ ಗಾಳಿ ನಿನ್ನದಂತೆ. ಕಾಣುತ್ತಿರುವ ಬೆಳಕು ನಿನ್ನದಂತೆ. ನಿಂತಿರುವ ನೆಲ ನಿನ್ನದಂತೆ. ತೊಡುವ ಬಟ್ಟೆ ನಿನ್ನದಂತೆ. ವಾಸಿಸುತ್ತಿರುವ ಮನೆ ನಿನ್ನದಂತೆ.

ಹುಟ್ಟಿಸಿದ ಅಪ್ಪ ಅಮ್ಮ ನಿನ್ನವರಂತೆ. ಅವರನ್ನುಟ್ಟಿಸಿದ ಅಜ್ಜ ಅಜ್ಜಿ ನಿನ್ನವರಂತೆ. ನನ್ನ ಹೆಂಡತಿ ಮಕ್ಕಳೂ ನಿನ್ನವರಂತೆ. ಕೊನೆಗೆ ನಾನೂ ನಿನ್ನವನಂತೆ.

ಹಾಗಾದರೆ ನಾನ್ಯಾರು  ? ನೀನಾಡಿಸುವ ಗೊಂಬೆಯೆ ? ಸರಿ ಒಪ್ಪಿಕೊಳ್ಳೋಣ. ಇಷ್ಟೆಲ್ಲಾ ಕೊಟ್ಟ ನಿನಗೆ ಕೃತಜ್ಞತೆ ಸಲ್ಲಿಸಬೇಕಿದೆ. ಎಲ್ಲಿರುವೆ ನೀನು ಅದನ್ನಾದರೂ ಹೇಳು. ನಿನ್ನಲ್ಲೇ ಇರುವೆ, ಅಲ್ಲಿರುವೆ, ಇಲ್ಲಿರುವೆ, ಎಲ್ಲೆಲ್ಲೂ ಇರುವೆ, ಈ ಕಥೆ ಎಲ್ಲಾ ಬೇಡ. ನಿಜ ಹೇಳು ಎಲ್ಲಿರುವೆ?. ಯಾರೋ ಮಹಾತ್ಮರು ಹೇಳಿದರು. ಯಾವುದೋ ಗ್ರಂಥ ಹೇಳಿದೆ.

ಅದೊಂದು ಅನುಭವ ಸರಿಯಾದ ಮಾರ್ಗದಲ್ಲಿ ಹುಡುಕಿದರೆ ಸಿಗುವನು ಎಂದು ಯಾರೋ ನನ್ನಂತ ನರಮಾನವರು ಹೇಳುವ ಪುರಾಣ ಬೇಡ. ನಿಜ ಹೇಳು ಎಲ್ಲಿರುವೆ?.

ಇಲ್ಲದಿರುವ ನಿನ್ನನ್ನು ಒಪ್ಪಲು ನಾನೇನು ಮೂರ್ಖನೆ. ನನಗೇನು ಗೊತ್ತಿಲ್ಲವೇ, ಸೃಷ್ಟಿಯ ಜೀವರಾಶಿಯಲ್ಲಿ ನಾನೊಂದು ಅಣು. ನಾನು ಬದುಕಿರುವುದೇ ನನಗೆ ಪ್ರಕೃತಿ ನೀಡಿದ ಸಾಮರ್ಥ್ಯದಿಂದ. ಯಾವ ಕ್ಷಣದಲ್ಲಾದರು ಅಳಿದು ಹೋಗುವ ಪ್ರಾಣವಿದು.

ನನಗಾದರೂ ಜೀವವಿದೆ, ನಿನಗೇನಿದೆ?. ಬರಿಯ ಪೋಟೋ, ಶಿಲೆ, ಮಂತ್ರ, ಯಂತ್ರ, ತಂತ್ರ. ಆದರೂ ಏಕೆ ನೀನು ನನ್ನನ್ನು ಕಾಡುವೆ ಪ್ರತಿಕ್ಷಣ ಭೂತದಂತೆ. ಮನವೆಂಬ ಮರ್ಕಟಕೆ ಹೆಂಡ ಕುಡಿಸಿ ಚೇಳು ಕುಟುಕಿಸಿದಂತಾಗಿದೆ ನನ್ನ ಮನಸ್ಸು. ಇದ್ದರೆ ಮರ್ಯಾದೆಯಿಂದ ಬಾ, ಇಲ್ಲದಿದ್ದರೆ ತೊಲಗಾಚೆ. ತಲೆ ತಿನ್ನಬೇಡ ಜನರೆಲ್ಲಾ ಗೊಂದಲದಲ್ಲಿದ್ದಾರೆ…
ಲೇಖನ-ವಿವೇಕಾನಂದ. ಎಚ್. ಕೆ. 9844013068.

- Advertisement -  - Advertisement -  - Advertisement - 
Share This Article
error: Content is protected !!
";