ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡುಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ, ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ಜನ್ಮದಿನದ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಶುಭಾಷಯಗಳನ್ನು ತಿಳಿಸಿ ನೂರ್ಕಾಲ ಬಾಳಲಿ ಎಂದು ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ನಮ್ಮ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ತಮ್ಮ ಮುತ್ಸದ್ದಿತನ ಮತ್ತು ಸಾರ್ವಜನಿಕ ಸೇವೆಯ ಬಗೆಗಿನ ಉತ್ಸಾಹಕ್ಕಾಗಿ ಎಲ್ಲೆಡೆ ಗೌರವಿಸಲ್ಪಡುತ್ತಾರೆ. ಹಲವಾರು ವಿಷಯಗಳ ಕುರಿತು ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಹೆಚ್ಚಿನ ಶಕ್ತಿಯ ಮೂಲವಾಗಿದೆ. ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ ಎಂದು ಹಾರೈಸುತ್ತೇನೆ‘ ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶುಭ ಕೋರಿ, ‘ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳಾದ ಹೆಚ್. ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆ‘ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನೂ ಪುತ್ರ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ‘ನನ್ನ ಪೂಜ್ಯ ತಂದೆಯವರು, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಮಣ್ಣಿನ ಮಗ ದೇವೇಗೌಡ ಅವರಿಗೆ ಜನ್ಮದಿನದ ಭಕ್ತಿ ಪೂರ್ವಕ ಶುಭಾಶಯಗಳು.
ನನ್ನ ಶಕ್ತಿ, ನನ್ನ ಧೈರ್ಯ, ನನ್ನ ಸ್ಫೂರ್ತಿ ನನ್ನ ತಂದೆಯವರೇ ಆಗಿದ್ದಾರೆ. ಅವರ ಸಂಘರ್ಷದ ಹಾದಿ, ಸಾಧನೆ, ಸೇವಾ ತತ್ಪರತೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ.
ಇಡೀ ಬದುಕನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿರುವ ಈ ಮಹಾನ್ ನಾಯಕನ ಕುಡಿಯಾಗಿ ಹುಟ್ಟಿರುವುದು ನನ್ನ ಜನ್ಮಜನ್ಮದ ಸುಕೃತ. ಆ ಭಗವಂತ ನನ್ನ ತಂದೆಯವರಿಗೆ ಇನ್ನೂ ಹೆಚ್ಚಿನ ಆಯುರಾಗ್ಯ ಕರುಣಿಸಲಿ. ಸುದೀರ್ಘ ಕಾಲ ನಮಗೆಲ್ಲಾ ಮಾರ್ಗದರ್ಶನ ಮಾಡಿ, ಜನಸೇವೆ ಮಾಡುವ ಚೈತನ್ಯ ನೀಡಲಿ‘ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ‘ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ‘ ಎಂದು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಗೌಡರ ಮೊಮ್ಮಗ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ‘ನನ್ನ ಪ್ರೀತಿಯ ಅಜ್ಜ, ನನ್ನ ಮಾರ್ಗದರ್ಶಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಮಣ್ಣಿನಮಗ ಹೆಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು.
ನಿಮ್ಮ ಹೋರಾಟದ ಬದುಕು ಮತ್ತು ಶಿಸ್ತು ಯುವ ಪೀಳಿಗೆಗೆ ಮಾದರಿಯಾಗಿದೆ. ಈ ಇಳಿವಯಸ್ಸಿನಲ್ಲೂ ಜನ ಸಾಮಾನ್ಯರ ಪರ, ರೈತರ ಪರ ನಿಮ್ಮಗಿರುವ ಕಾಳಜಿ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ. ಭಗವಂತ ನಿಮಗೆ ಹೆಚ್ಚಿನ ಆಯುರಾರೋಗ್ಯವನ್ನು ಕರುಣಿಸಿ ನಿಮ್ಮ ಮಾರ್ಗದರ್ಶನ ಇನ್ನಷ್ಟು ದಿನಗಳ ಕಾಲ ನಮ್ಮೆಲ್ಲರಿಗೂ ಸಿಗುವಂತಾಗಲೆಂದು ಆಶಿಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.
ಹೆಚ್. ಡಿ. ದೇವೇಗೌಡರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರುಗಳಿಂದ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಇತ್ತ ಬಿಜೆಪಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿ ಹಲವು ನಾಯಕರು ಶುಭಾಶಯ ಕೋರಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ಶನಿವಾರ ರಾತ್ರಿ ಪದ್ಮನಾಭ ನಗರದ ನಿವಾಸಕ್ಕೆ ತೆರಳಿ ದೇವೇಗೌಡರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದರು.