ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಒಸಿ ಸಿಗದ ಹೊಸ ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
1200 ಚದರ ಅಡಿ ನಿವೇಶನದಲ್ಲಿ ನಿರ್ಮಿಸಲಾದ ಮನೆಗಳಿಗೆ ಸ್ವಾಧೀನಾನುಭವ ಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಒಸಿ ಇಲ್ಲದ ಕಾರಣ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಪಡೆಯಲಾಗದೇ ಪರದಾಡುತ್ತಿದ್ದ ಬೆಂಗಳೂರಿನ ಲಕ್ಷಾಂತರ ಮಂದಿ ನಿಟ್ಟುಸಿರು ಬಿಡುವಂತಾಗಿದೆ. 1200 ಚದರ ಅಡಿ (30×40) ನಿವೇಶನದಲ್ಲಿನ ಹೊಸ ಮನೆ ಮಾಲೀಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲೇ ಈ ಸಂಬಂಧ ತೀರ್ಮಾನ ಕೈಗೊಂಡಿತ್ತು.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅನ್ವಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ, 1200 ಚದರ ಅಡಿಗಳ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾಗಿರುವ, ನೆಲ+2 ಅಂತಸ್ತು ಅಥವಾ ಸ್ಟಿಲ್ಟ್ + 3 ಅಂತಸ್ತುಗಳವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಸಿಸಿ, ಒಸಿ ಇಲ್ಲದೇ ಮನೆ ನಿರ್ಮಿಸಿರುವವರಿಗೆ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರಕ್ಕೆ ತಲೆನೋವಾಗಿತ್ತು.ಇದರಿಂದಸುಮಾರು 4 ಲಕ್ಷಕ್ಕೂ ಅಧಿಕ ಮನೆಗಳು ಒಸಿ ಇಲ್ಲದೇ ಮೂಲಸೌಕರ್ಯ ಸಂಪರ್ಕ ಪಡೆಯಲಾಗದೆ ಪರದಾಡುವಂತಾಗಿತ್ತು.
ಸುಪ್ರೀಂಕೋರ್ಟ್ 2024ರಲ್ಲಿ ನೀಡಿದ ಆದೇಶದಿಂದ ರಾಜ್ಯ ಸರ್ಕಾರದ ಕೈ ಕಟ್ಟಿದಂತಾಗಿತ್ತು. ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ ಮನೆಗಳು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ನಿಯಮದಡಿ ಸ್ವಾಧೀನಾನುಭವ ಪ್ರಮಾಣ ಪತ್ರದಿಂದ ವಿನಾಯಿತಿ ನೀಡುವ ಅಧಿಕಾರ ಸರ್ಕಾರ ಹೊಂದಿದೆ.
ಅದರಂತೆ ಇದೀಗ 30×40 ನಿವೇಶನದಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿರುವ ಮತ್ತು ನಿರ್ಮಿಸುವ, ನೆಲಮಹಡಿ ಸಹಿತ ಎರಡು ಅಂತಸ್ತು ಅಥವಾ ಬೇಸ್‌ಮೆಂಟ್ ಸಹಿತ ಮೂರು ಮಹಡಿ ಕಟ್ಟಡಕ್ಕೆ ಒಸಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಇದು ಸಹಕಾರಿಯಾಗಲಿದೆ.
ಬೇಡಿಕೆ ಈಡೇರಿಸಿದ ಡಿಕೆಶಿ: ಸ್ವಾಧೀನಾನುಭವ ಪತ್ರ (ಒಸಿ) ಹಾಗೂ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಸಿಸಿ) ಪಡೆಯದ 1,200 ಚದರದಡಿವರೆಗಿನ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವ ಸಂಬಂಧ ಚರ್ಚೆ ನಡೆಸಲಾಗಿದೆ.
ಮುಂದೆ ಎದುರಾಗುವ ಕಾನೂನು ತೊಡಕುಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಅದರಂತೆ ಸಾರ್ವಜನಿಕರ ಕೋರಿಕೆಯನ್ನು ಈಗ ಅವರು ಈಡೇರಿಸಿದ್ದಾರೆ.

