ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿರಂತರ ಅಭ್ಯಾಸ ಮತ್ತು ಪುನರ್‌ಮನನ ಮಾಡಿಸುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಚಿನ್ಮೂಲಾದ್ರಿ ಪ್ರೌಢಶಾಲೆ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುರಿತು ನಿಧಾನಗತಿಯ ಕಲಿಕಾರ್ಥಿಗಳಿಗೆ ಶೇ.೫೦ರಷ್ಟು ಅಂಕ ಗಳಿಸಲು ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳು ಶಾಲೆಗೆ ಪ್ರತಿನಿತ್ಯ ಹಾಜರಾಗುವಂತೆ ಕ್ರಮವಹಿಸಬೇಕು. ಇಲಾಖೆಯಿಂದ ನಿಗದಿಪಡಿಸಿರುವ ೪ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರವನ್ನು ಪುನ; ಪುನ; ಅಭ್ಯಾಸ ಮಾಡಿಸಬೇಕು. ಪ್ರಶ್ನೆಪತ್ರಿಕೆ ಸ್ವರೂಪ, ಸರಳ, ಸಾಧಾರಣ, ಕ್ಲಿಷ್ಟವಾರು ಪ್ರಶ್ನೆಗಳನ್ನು ಪರಿಚಯಿಸಬೇಕು. ವಿದ್ಯಾರ್ಥಿಗಳ ಉತ್ತರಗಳನ್ನು ಪ್ರಶ್ನೆವಾರು ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಿರಿಜ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ವಿಷಯ ಪರಿಕಲ್ಪನೆ ಅರ್ಥೈಸಿ ಬೋಧಿಸುವ ಮೂಲಕ ಎಲ್ಲ ಮಕ್ಕಳು ಉತ್ತೀರ್ಣರಾಗುವಂತೆ ಸಿದ್ಧಗೊಳಿಸಬೇಕು. ಪ್ರತಿ ಮಗುವಿನಲ್ಲಿ ಅಂತಕರಣದ ಪ್ರತಿಭೆಯಿರುತ್ತದೆ. ಅವರ ಪ್ರತಿಭೆಗೆ ಪ್ರೋತ್ಸಾಹಿಸುವ ಮೂಲಕ ಸಮಾಜಮುಖಿಯಾಗಿ ಜೀವನ ನಡೆಸಲು ಉತ್ತಮ ಮಾನವ ಸಂಪನ್ಮೂಲ ನಿರ್ಮಿಸಬೇಕು ಎಂದರು.
ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಸಂಸ್ಕಾರ ಅಗತ್ಯ. ಶಿಕ್ಷಕರು ಪಠ್ಯವಿಷಯದ ಜತೆಗೆ ಶಿಸ್ತು, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಭವಿಷ್ಯದ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಗತ್ಯವಿದೆ. ಪುಸ್ತಕಗಳು ಜ್ಞಾನದ ದೀವಿಗೆಗಳಾಗಿದ್ದು ಸಾಹಿತ್ಯ ಕೃತಿಗಳನ್ನು, ದಾರ್ಶನಿಕರ ಜೀವನ ಸಾಧನೆಗಳನ್ನು ಓದಲು ಮಕ್ಕಳಿಗೆ ಪ್ರೇರಣೆ ನೀಡುವ ಮೂಲಕ ವಿದ್ಯಾರ್ಥಿಗಳನ್ನು ರಾಷ್ಟ್ರದ ಉತ್ಪಾದಕ ಶಕ್ತಿಯಾಗಿ ಬೆಳೆಸಬೇಕು ಎಂದರು.
ಕನ್ನಡ ಭಾಷಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಜಲಿಂಗಪ್ಪ, ಮುರಳಿ, ಕಾರ್ಯದರ್ಶಿ ಸಿ.ಮಂಜಪ್ಪ, ಖಜಾಂಚಿ ಲಿಂಗೇಶ್, ಶಿಕ್ಷಣ ಸಂಯೋಜಕರಾದ ಕೆ.ಆರ್.ಲೋಕೇಶ್, ಮಲ್ಲಿಕಾರ್ಜುನ, ರಮೇಶ್‌ರೆಡ್ಡಿ, ತಿಪ್ಪೇಸ್ವಾಮಿ, ವಸಂತಕುಮಾರ, ಸತೀಶ, ಕನ್ನಡ ಭಾಷಾ ಶಿಕ್ಷಕರು ಇದ್ದರು.

