ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡೀಸೆಲ್ ಬೆಲೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘವು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಗುರುವಾರ ಹಿಂಪಡೆದಿದೆ.
ಮುಷ್ಕರ ನಿರತ ಲಾರಿ ಮಾಲೀಕರೊಂದಿಗೆ ಮೂರನೇ ಬಾರಿಗೆ ನಡೆಸಿದ ಸಭೆಯ ಮಾತುಕತೆ ಫಲಪ್ರದವಾಗಿದೆ. ಈ ಕೂಡಲೇ ಮುಷ್ಕರವನ್ನು ಕೈಬಿಡುತ್ತಿರುವುದಾಗಿ ಸಂಘದ ರಾಜ್ಯಾಧಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಏಪ್ರಿಲ್ 15 ರಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತ್ಯೇಕವಾಗಿ ಎರಡು ಬಾರಿ ಸಭೆ ನಡೆಸಿದ್ದರೂ ಮಾತುಕತೆ ವಿಫಲವಾಗಿದ್ದರಿಂದ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಲಾಗಿತ್ತು.
ಮುಷ್ಕರ ಎಫೆಕ್ಟ್ ಪರಿಣಾಮ ದಿನೇ ದಿನೇ ಅಗತ್ಯ ವಸ್ತುಗಳ ಸಾಗಣೆ ಮತ್ತು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇನ್ನೆರಡು ದಿನ ಹೀಗೆ ಮುಂದುವರೆದರೆ ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀಳುವ ಆತಂಕ ಎದುರಾಗಿತ್ತು.ಈ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಅವರು ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು.
ಲಾರಿ ಮಾಲೀಕರ ಪ್ರಮುಖ ಬೇಡಿಕೆಗಳನ್ನ ಕಾಲಮಿತಿಯಲ್ಲಿ ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದರಿಂದ ಈ ಕ್ಷಣದಿಂದಲೇ ಮುಷ್ಕರ ಹಿಂಪಡೆಯುತ್ತಿರುವುದಾಗಿ ಷಣ್ಮುಗಪ್ಪ ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯದ ಎಲ್ಲಾ ರೀತಿಯ ಲಾರಿಗಳನ್ನು ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಆರ್ ಟಿಒ ಅಧಿಕಾರಿಗಳಿಂದ ಪರಿಶೀಲಿಸುವ ಕೆಲಸವಾಗುತ್ತಿತ್ತು. ಅನ್ಯ ರಾಜ್ಯಗಳಲ್ಲಿ ಬಾರ್ಡರ್ ಪೋಸ್ಟ್ ಇರಲಿಲ್ಲ. ಇದನ್ನ ತೆರವು ಮಾಡಬೇಕೆಂದು ಹೇಳಿದ್ದೇವು. ಮೂರು ತಿಂಗಳಲ್ಲಿ ಹಂತ-ಹಂತವಾಗಿ ತೆರವು ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ತಿಳಿಸಿದರು.
ಹಳೆಯ ವಾಹನಗಳಿಗೆ ಎಫ್ ಸಿ ಶುಲ್ಕ ತಕ್ಷಣದಿಂದ ಕಟ್ಟದಂತೆ ತಿಳಿಸಿದೆ. ಕಾಲ ಕಾಲಕ್ಕೆ ಅನುಗುಣವಾಗಿ ಲಾರಿ ಬಾಡಿಗೆ ದರ ಹೆಚ್ಚಿಸಲಾಗುವುದು. 2023ರಲ್ಲಿ ಈ ಬಗ್ಗೆ ಸರ್ಕಾರವು ನಿರ್ಣಯ ಕೈಗೊಂಡಿತ್ತು. ಆದರೆ ಅನುಷ್ಠಾನಕ್ಕೆ ತಂದಿರಲಿಲ್ಲ. ಈ ಬಗ್ಗೆ ಇನ್ನೊಂದು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಭರವಸೆ ನೀಡಿದೆ. ಹೀಗಾಗಿ ಲಾರಿ ಮುಷ್ಕರ ಹಿಂಪಡೆದಿದ್ದೇವೆ ಎಂದು ತಿಳಿಸಿದರು.