ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉದ್ಯೋಗ ಮೇಳಗಳನ್ನು ಏರ್ಪಡಿಸುವ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ವಿಭಾಗೀಯ ಮಟ್ಟದ ಉದ್ಯೋಗ ಮೇಳವನ್ನು ಕಲಬುರ್ಗಿಯಲ್ಲಿ ಇಂದು ಏರ್ಪಡಿಸಲಾಗಿದೆ. ಮೈಸೂರು ಹಾಗೂ ಹುಬ್ಬಳ್ಳಿ, ಧಾರವಾಡದಲ್ಲಿಯೂ ಉದ್ಯೋಗ ಮೇಳವನ್ನು ಏರ್ಪಡಿಸಲಾಗುತ್ತಿದೆ. ಯುವನಿಧಿ ಯೋಜನೆಯನ್ನು ಜಾರಿ ಮಾಡಿದ್ದು, ನಮಗೆ ನಿರುದ್ಯೋಗದ ಸಮಸ್ಯೆ ನಿವಾರಣೆಯ ಉದ್ದೇಶವಿದೆ. ಉದ್ಯೋಗವನ್ನು ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಏ.17 ರಂದು ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಕುರಿತು ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡಲಾಗುವುದು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ತೀರ್ಮಾನ ಮಾಡಲಾಗುವುದು. ಸಾಮಾಜಿಕ, ಆರ್ಥಿಕ ಸಮೀಕ್ಷೆ ಇದಾಗಿದ್ದು, ಯಾವ ಸಮುದಾಯದವರಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದರು.
ದಾವಣಗೆರೆಯಲ್ಲಿ ಅನೈತಿಕ ಸಂಬಂಧದ ಆರೋಪದ ಮೇಲೆ ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ, ಅಪರಾಧ. ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಖಚಿತ, ಕಾನೂನು ಉಲ್ಲಂಘಿಸಿದರೆ ಯಾರು ಎಷ್ಟೇ ಪ್ರಬಲವಾಗಿದ್ದರೂ, ಬಲಿ ಹಾಕುತ್ತೇವೆ ಎಂದು ಸಿಎಂ ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಮ್ಮ ನಾಯಕಿಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಇದನ್ನು ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಿನ್ನೆ ಮೊನ್ನೆ ಪ್ರಾರಂಭವಾಗಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಆಸ್ತಿ ಮುಟ್ಟುಗೋಲು ಹಾಕುವುದು, ಚಾರ್ಚ್ ಶೀಟ್ ಹಾಕುವುದು ರಾಜಕೀಯ ದ್ವೇಷದಿಂದ ಮಾಡುತ್ತಿದ್ದಾರೆ ಅಷ್ಟೆ ಎಂದು ಸಿದ್ದರಾಮಯ್ಯ ತಿಳಿಸಿದರು.