ಮಾದಿಗ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಬದ್ದ: ಡಿ.ಸುಧಾಕರ

WhatsApp
Telegram
Facebook
Twitter
LinkedIn

ಮಾದಿಗ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಬದ್ದ: ಡಿ.ಸುಧಾಕರ

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:

ಶೋಷಿತ ಸಮಾಜಕ್ಕೆ ಪ್ರಜ್ವಲ ಬೆಳಕು ನೀಡಿದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಆದರ್ಶಗಳು ಸಮಾಜಕ್ಕೆ ಶ್ರೀರಕ್ಷೆಯಾಗಿದೆ. ಯಾವುದೇ ಕಾರಣಕ್ಕೂ ಈ ಸಮುದಾಯ ಚಿಂತನೆ ಮಾಡುವ ಅಗತ್ಯವಿಲ್ಲ, ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಸದಾಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ತಿಳಿಸಿದರು.

 

ಅವರು, ದಲ್ಲಾಲರ ಸಮುದಾಯ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ತಾಲ್ಲೂಕು ಘಟಕ ಹಾಗೂ ನಿವೃತ್ತ ಮಾದಿಗ ನೌಕರರ ಕ್ಷೇಮಾಭಿವೃದ್ದಿ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಮಾದಿಗ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಡಿ.ಟಿ.ಜಗನ್ನಾಥ, ಮಾದಿಗ ನೌಕರ ಸಾಂಸ್ಕೃತಿಕ ಸಂಘ ಕಳೆದ ೧೯೯೮ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಘಾಟನೆಯಾಯಿತು. ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ,ಗೌರವಿಸುವ ಕಾರ್ಯವನ್ನು ಮಾದಾರಚನ್ನಯ್ಯಸ್ವಾಮಿ ನೇತೃತ್ವದಲ್ಲಿ ಈ ಸಂಘಟನೆ ಆರಂಭಗೊಂಡಿದೆ. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ೩೭ ವರ್ಷಗಳ ಕಾಲ ಈ ಕಾರ್ಯವನ್ನು ಮಾಡುತ್ತಿದೆ. ಇದರಿಂದ ಸಮುದಾಯದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ ಎಂದರು.

 

ದಿವ್ಯಸಾನಿಧ್ಯ ವಹಿಸಿದ್ದ ಹಿರಿಯೂರು ಕೋಡಿಹಳ್ಳಿ ಆದಿಜಾಂಭವಶಾಖಾಮಠದ ಷಡಾಕ್ಷರಿಮುನಿದೇಶಿ ಕೇಂದ್ರಸ್ವಾಮೀಜಿ ಮಾತನಾಡಿ, ಸಮುದಾಯದ ಕ್ರಿಯಾಶೀಲ ಚಟುವಟಿಕೆಗೆ ಕೀಳಿರಿಮೆ ಎಂದಿಗೂ ಅಡ್ಡಿಯಾಗಬಾರದು. ಇಂದಿಗೂ ಈ ಸಮುದಾಯದ ಅಸಮಾನತೆ, ಅವಮಾನದಿಂದ ಕುಗ್ಗಿದೆ. ಮುಂದಿನ ದಿನಗಳಲ್ಲಾದರೂ ಸಮುದಾಯ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಇಂತಹ ಕಾರ್ಯಗಳ ಮೂಲಕ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕು ಎಂದರು.

 

ಪ್ರೊ.ಗುರುಮೂರ್ತಿ ಮಾತನಾಡಿ, ನೂರಾರು ವರ್ಷಗಳಿಂದ ಈ ಸಮುದಾಯದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿಗೌರವಿಸುವ ಕಾರ್ಯ ನಡೆಯದೆ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಭೆ ಇದ್ದರೂ ಹೊರಬರಲು ಸಾಧ್ಯವಾಗಿಲ್ಲ. ಆದರೆ, ಇತ್ತೀಚೆಗೆ ಬದಲಾದ ಕಾಲಪತಿಸ್ಥಿತಿಯಲ್ಲಿ ಈ ಸಮುದಾಯದ ವಿದ್ಯಾರ್ಥಿಗಳು ಪ್ರತಿಭೆಗೆ ಆರ್ಹರು ಎಂಬುವುದನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ ಎಂದರು.

 

ಮಾದಿಗ ನೌಕರರ ಸಾಂಸ್ಕೃತಿಕ ಸಂಘ ತಾಲ್ಲೂಕು ಅಧ್ಯಕ್ಷ ಡಿ.ನಾಗರಾಜ ಮಾತನಾಡಿ, ಇಂದಿನ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ೪೦ ಎಸ್‌ಎಸ್‌ಎಲ್‌ಸಿ, ೨೦ ಪಿಯುಸಿ ಹಾಗೂ ೧೫ ಸಮುದಾಯದ ನಿವೃತ್ತ ನೌಕರರನ್ನು ಸನ್ಮಾನಿಸಲಾಗಿದೆ. ಪ್ರತಿಭಾಪುರಸ್ಕಾರದ ಮೂಲಕ ಜನಾಂಗದ ಐಕ್ಯತೆಗೆ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದೆ. ಸಮಾಜದ ಹಲವಾರು ಸಮಸ್ಯೆಗಳನ್ನು ಎದುರಿಸಿ ಅಭಿವೃದ್ದಿ ಪಥದತ್ತ ನಾವೆಲ್ಲರೂ ಸಾಗಬೇಕು ಎಂದರು.

 

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ, ಮಾದಿಗ ಸಮುದಾಯ ಮೂರು ಬಾರಿ ನಾನು ಶಾಸಕನಾಗಲು ಉತ್ತಮ ಸಹಕಾರ ನೀಡಿದೆ. ಈ ಸಮುದಾಯದ ಅಭಿವೃದ್ದಿಪರ ಚಿಂತನೆಗಳಿಗೆ ನನ್ನ ಸಹಕಾರ ಯಾವಾಗಲು ಇದೆ. ನಗರದ ಚಿತ್ರದುರ್ಗ ರಸ್ತೆಯ ಜಗಜೀವನರಾಂ ಭವನ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಸಂಘದ ಪದಾಧಿಕಾರಿಗಳು ನಿವೇಶನದ ಬೇಡಿಕೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆಂದರು.

 

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷ ಓ.ಸುಜಾತ, ಸುಮಕ್ಕ, ಕೆ.ವೀರಭದ್ರಪ್ಪ, ಎಚ್.ತಿಪ್ಫೇಸ್ವಾಮಿ, ಬಿ.ಆನಂದಕುಮಾರ್, ನಾಗರಾಜು, ಕಾವ್ಯ, ಮುಖ್ಯ ಅಭಿಯಂತರ ಕೆ.ಬಿ.ಜಗದೀಶ್, ನಿವೃತ್ತ ಎಸಿ ಎಂ.ಮಲ್ಲಿಕಾರ್ಜುನ್, ಡಿ.ದಯಾನಂದ, ಡಿ.ಟಿ.ಶ್ರೀನಿವಾಸ್, ಎಚ್.ಗುರುಮೂರ್ತಿ, ಕ್ಷೇಮಾಭಿವೃದ್ದಿ ಸಂಘ ಗೌರವಾಧ್ಯಕ್ಷ ಟಿ.ಚೌಡಣ್ಣ, ಕಾರ್ಯದರ್ಶಿ ವೈ.ಆನಂದಮೂರ್ತಿ, ಉಪಾಧ್ಯಕ್ಷ ರಾಮಣ್ಣ, ಎಚ್.ಹನುಮಂತಪ್ಪ, ವಿಷ್ಣುವರ್ಧನ, ಎಸ್.ಬಿ.ತಿಪ್ಪೇಸ್ವಾಮಿ, ಡಿ.ಟಿ.ಹನುಮಂತರಾಯ, ಶ್ರೀನಿವಾಸ್, ಮುರಳಿ ಮುಂತಾದವರು ಭಾಗವಹಿಸಿದ್ದರು.

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon