ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಎಸ್. ಭರವಸೆ ನೀಡಿದರು.
ಮಡಿಲು ಸ್ವಾವಲಂಭಿ ಟ್ರಸ್ಟ್ ಚಿತ್ರದುರ್ಗ, ಅಭಿವೃದ್ದಿ ಸಾಮಾಜಿಕ ಸೇವಾ ಸಂಸ್ಥೆ, ಸಮರ ಸಾರಥಿ, ಅಮರ ಸಾಧಕಿಯರ ಸಮಾಜ ಸೇವಾ ಸಂಘ ಮಂಡ್ಯ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಟೇಡಿಯಂ ಸಮೀಪವಿರುವ ಕ್ರೀಡಾ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಲೈಂಗಿಕ ಅಲ್ಪಸಂಖ್ಯಾತರಿಗೆ ಸೋಲಾರ್ ಲೈಟ್, ಮೇಕೆ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೌಲತ್ತುಗಳು ಮಂಗಳಮುಖಿಯರಿಗೆ ಸುಗಮವಾಗಿ ಸಿಗಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅವರಿಗೂ ನಾನಾ ರೀತಿಯ ಸಮಸ್ಯೆ ಸವಾಲುಗಳಿರುತ್ತವೆ. ಎಲ್ಲವನ್ನು ಮೆಟ್ಟಿ ನಿಲ್ಲಬೇಕು. ಆದಾಯ ತರುವ ಕೆಲಸವನ್ನು ಏಕೆ ಮಾಡಬಾರದೆಂದು ಅಂದುಕೊಳ್ಳುವುದು ಸಹಜ. ನಿವೇಶನ ವಸತಿರಹಿತರಿಗೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳಿಂದ ಧಕ್ಕಬೇಕಾದ ಅನುಕೂಲಗಳನ್ನು ತಲುಪಿಸಲು ಸಿದ್ದರಿರುವುದಾಗಿ ಡಾ.ಆಕಾಶ್ ಎಸ್. ತಿಳಿಸಿದರು.
ಮಂಗಳಮುಖಿ ಡಾ.ಅರುಂಧತಿ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಮೇಕೆ ಮರಿಗಳನ್ನು ಹಾಗೂ ಸೋಲಾರ್ ಲೈಟ್‌ಗಳನ್ನು ವಿತರಿಸುತ್ತಿರುವುದು ನಿಜಕ್ಕೂ ಅವರಲ್ಲಿರುವ ಔದಾರ್ಯವನ್ನು ಪ್ರದರ್ಶಿಸುತ್ತದೆ. ಅವರಂತೆ ನೀವುಗಳು ಸ್ವ-ಉದ್ಯೋಗ ಕೈಗೊಂಡು ಸಮಾಜದಲ್ಲಿ ಎಲ್ಲರಂತೆ ಬದುಕುವಂತಾಗಬೇಕೆಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಕೆ.ಹೆಚ್. ಮಾತನಾಡುತ್ತ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ನೀವುಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಂಗಳಮುಖಿ ಡಾ.ಅರುಂಧತಿ ೨೨ ಲಕ್ಷ ರೂ.ಗಳ ಸಾಲ ಪಡೆದು ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡಿಕೊಂಡು ಸ್ವಾವಲಂಭಿಯಾಗಿ ಬದುಕುತ್ತಿದ್ದಾರೆ. ಅಂತಹವರನ್ನು ನೀವುಗಳು ಮಾದರಿಯನ್ನಾಗಿಟ್ಟುಕೊಳ್ಳಬೇಕೆಂದು ಲೈಂಗಿಕ ಅಲ್ಪಸಂಖ್ಯಾತರಿಗೆ ಕರೆ ನೀಡಿದರು.
ಲೈಂಗಿಕ ಅಲ್ಪಸಂಖ್ಯಾತರು ಎಲ್ಲರಂತೆ ಗೌರವದಿಂದ ಬದುಕು ಕಟ್ಟಿಕೊಳ್ಳಲಿ ಎನ್ನುವ ಕಾರಣಕ್ಕಾಗಿ ಡಾ.ಅರುಂಧತಿ ಉಚಿತವಾಗಿ ಮೇಕೆ ಮರಿಗಳನ್ನು ವಿತರಿಸಿ ಉದಾರತೆ ಮೆರೆದಿದ್ದಾರೆ. ಹಾಗಾಗಿ ನೀವುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಸೇರಿದಂತೆ ಬೇರೆ ಬೇರೆ ವೃತ್ತಿಯನ್ನು ಕೈಬಿಟ್ಟು ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಸುಧಾ ಸಿ.ಓ. ಮಾತನಾಡಿ ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಂಡು ಗೌರವದಿಂದ ಬದುಕುವುದನ್ನು ರೂಢಿಸಿಕೊಳ್ಳಿ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ನೀವುಗಳು ಕೆಲವೊಮ್ಮೆ ಸೌಲಭ್ಯಗಳಿಗಾಗಿ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದಿದ್ದಾಗ ಅನುಕೂಲಗಳನ್ನು ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಿ. ಮಂಗಳಮುಖಿ ಡಾ.ಅರುಂಧತಿರವರು ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿಯಾಗಿ ಬದುಕುತ್ತಿದ್ದಾರೆಂದು ಪ್ರಶಂಶಿಸಿದರು.
ಸರ್ಕಾರದ ವಿವಿಧ ಇಲಾಖೆಗಳಿಂದ ಆಯೋಜಿಸಲಾಗುವ ತರಬೇತಿಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ ಎಂದು ಲೈಂಗಿಕ ಅಲ್ಪಸಂಖ್ಯಾತರಿಗೆ ಕಿವಿಮಾತು ಹೇಳಿದರು.
ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ಸದಸ್ಯೆ ಆರತಿ, ಮಲ್ಲಮ್ಮ ಕುಂಬಾರ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ವಿಮುಕ್ತಿ ವಿದ್ಯಾಸಂಸ್ಥೆಯ ಅನ್ನಪೂರ್ಣ, ಡಾ.ಅರುಂಧತಿ ಇವರುಗಳು ವೇದಿಕೆಯಲ್ಲಿದ್ದರು.

