ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ಪಟ್ಟಣದ ಡಾ.ಬಿ.ಆರ್.ಆಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಸಾರ್ವಜನಿಕ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಸ್ವಚ್ಚತೆ ಇಲ್ಲದೆ, ಊಟಕ್ಕೆ ಬೂಸ್ಟ್ ಹಿಡಿದ ಬೆಲ್ಲ ಬಳಕೆ, ಹುಳುಗಳಿಂದ ಕೂಡಿದ ಪಡಿತರ ಬಳಕೆ ಮಾಡುತ್ತಿದ್ದು, ವಿದ್ಯಾರ್ಥಿನಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯ ಏನಾಗಲಿದೆ ಎಂದು ನಿಲಯ ಪಾಲಕರಿಗೆ ಹೊಳಲ್ಕೆರೆ ಪುರಸಭೆ ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನ ವೇದಮೂರ್ತಿ ಭಾನುವಾರ ಹಾಸ್ಟಲ್ ಗೆ ಭೇಟಿ ನೀಡಿ ತರಾಟೆ ತೆಗೆದುಕೊಂಡರು. ಅವರು ಪಟ್ಟಣದ ಡಾ.ಬಿ.ಆರ್.ಆಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯ ಸಾರ್ವಜನಿಕ ಸರ್ಕಾರಿ ವಿದ್ಯಾರ್ಥಿನಿಯಲಕ್ಕೆ ಭಾನುವಾರ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಬಳಿಕ ಪಡಿತರ ಧಾನ್ಯ, ಬೆಲ್ಲ, ಶೌಚಾಲಯ, ಕೊಠಡಿಗಳ ವ್ಯವಸ್ಥೆ ಪರಿಶೀಲಿಸಿದಾಗ ಅಲ್ಲಿನ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕಲ್ಪಿಸಲು ಸರ್ಕಾರ ಸಾಕಷ್ಟು ಹಣ ವ್ಯಯಿಸುತ್ತಿದೆ. ಆದರೆ ಹಾಸ್ಟಲ್‌ಗಳಲ್ಲಿ ಸಾಕಷ್ಟು ಸೌಲಭ್ಯಗಳು ಹೆಣ್ಣು ಮಕ್ಕಳಿಗೆ ಸಿಕ್ಕುತ್ತಿಲ್ಲ. ಅರ್ಥಿಕ ದುರ್ಬಲ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ವಸತಿ ನಿಲಯ ಸ್ಥಾಪಿಸಿ ಹಲವು ಸೌಲಭ್ಯ ಕಲ್ಪಿಸಲು ಸಾಕಷ್ಟು ಹಣ ವಿನಿಯೋಗಿಸುತ್ತಿದೆ. ನಿಲಯ ಪಾಲಕರುಗಳು ಅಸಡ್ಡೆ, ಅಸಮರ್ಪಕ ನಿರ್ವಹಣೆಯಿಂದಾಗಿ ಹಾಸ್ಟೆಲ್ ಗಳು ದುಸ್ಥಿತಿಯಲ್ಲಿವೆ. ಅಧಿಕಾರಿಗಳ ನೆಡೆಯಿಂದಾಗಿ ಸರ್ಕಾರಿ ಸೌಲಭ್ಯ ಹೆಣ್ಣು ಮಕ್ಕಳಿಗೆ ಮರಿಚಿಕೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಸ್ಟೆಲ್‌ನಲ್ಲಿರುವ ಹೆಣ್ಣು ಮಕ್ಕಳ ಪೋಷಕರೊಬ್ಬರು ನನ್ನನ್ನು ಭೇಟಿ ಮಾಡಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸರಿಪಡಿಸುವಂತೆ ಮನವಿ ಮಾಡಿದ್ದರಿಂದ ನಾನು ಇಲ್ಲಿಗೆ ಬಂದು ಪರಿಶೀಲನೆ ಮಾಡಿದ್ದು ಇಲ್ಲಿನ ಅವ್ಯವಸ್ಥೆ ಕಂಡು ಬೇಸರವಾಗಿದೆ. ಊಟದ ಕೋಣೆ, ಪಡಿತರ ದಾಸ್ತಾನು ಕೊಠಡಿ, ಶೌಚಾಲಯ, ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳಲ್ಲಿ ಸ್ವಚ್ಚತೆ ಇಲ್ಲ. ಹಾಸ್ಟೆಲ್ ಸುತ್ತಲು ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಸೊಳ್ಳೆ ತಾಣವಾಗಿದೆ.
ಹಾಸ್ಟೆಲ್ ಮೇಲ್ಚಾವಣಿ ಪದರು ಉದುರುತ್ತಿದೆ. ಶೌಚಾಲಯ ಗಬ್ಬು ವಾಸನೆ ಹೊಡೆಯುತ್ತಿದ್ದರೂ ಪಕ್ಕದ ಕೊಠಡಿಯಲ್ಲಿ ಅಡಿಗೆ ತಯಾರಿಸುತ್ತಿದ್ದಾರೆ. ಪಾತ್ರೆಗಳು ಕರಕಲು ಬಿದ್ದಿವೆ. ಶುದ್ದ ಕುಡಿಯುವ ನೀರಿಲ್ಲ. ನಿತ್ಯ ಸ್ಥಾನ ಮಾಡಲು ನೀರಿನ ಸಮಸ್ಯೆ ಇದೆ. ಸರ್ಕಾರ ನೀಡುವ ಸೋಪು, ಎಣ್ಣೆ, ಪೇಸ್ಟ್ ಕಿಟ್ ಸಕಾಲಕ್ಕೆ ವಿದ್ಯಾರ್ಥಿಗಳಿಗೆ ವಿತರಣೆ ಆಗುತ್ತಿಲ್ಲ. ಕೊಳೆತ ತರಕಾರ ಬಳಕೆ ಮಾಡುತ್ತಿದ್ದಾರೆ. ಒಟ್ಟಾರೆ ಹಾಸ್ಟೆಲ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಅವ್ಯವಸ್ಥೆಯಿಂದ ಕೂಡಿದ್ದು, ಸ್ವಚ್ಛತೆ ಮರೀಚಿಕೆಯಾಗಿ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಬರುವ ಭೀತಿ ಎದುರಿಸುತ್ತಿದ್ದಾರೆ.
ಸರ್ಕಾರ ಹಾಸ್ಟೆಲ್‌ಗಳನ್ನ ವ್ಯವಸ್ಥಿತವಾಗಿ ನಡೆಸಲು ಸಾಕಷ್ಟು ಅನುದಾನ ನೀಡುತ್ತಿದ್ದರೂ, ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಆದರೆ ನಿಲಯ ಪಾಲಕರ ಭಯದಿಂದ ಮುಕ್ತ ಮನಸ್ಸಿನಿಂದ ಮಕ್ಕಳು ಹಾಸ್ಟೆಲ್ ಗಳಲ್ಲಿನ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ಹಾಸ್ಟೆಲ್ ನಿಂದ ಹೊರಗೆ ಹಾಕಿದಲ್ಲಿ ನಮ್ಮ ವಿದ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಎಲ್ಲವನ್ನು ಅನುಭವಿಸಿಕೊಂಡು ಹೊಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಇದೆ ಸಮಯದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ವಿದ್ಯಾರ್ಥಿನಿಯರು ಶಿಕ್ಷಣವಂತರಾಗಬೇಕು. ಎನೇ ಸಮಸ್ಯೆಗಳಿದ್ದರೂ ಯಾರೊಬ್ಬರು ಶಿಕ್ಷಣದಿಂದ ವಂಚತರಾಗಬಾರದು. ಮಹಿಳಾ ಸಬಲೀಕರಣಕ್ಕಾಗಿ ಪ್ರತಿಯೊಬ್ಬ ಯುವತಿಯೂ ಶಿಕ್ಷಣ ಪಡೆಯಬೇಕೆಂದು ಎಂದು ಹೆಚ್.ಆರ್.ನಾಗರತ್ನ ವೇದಮೂರ್ತಿ ಸಲಹೆ ನೀಡಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಎ.ಚಿತ್ರಪ್ಪ ಉಪಸ್ಥಿತರಿದ್ದರು.