ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರ ಮನೆಗಳನ್ನು ನಿರ್ಮಿಸಿಕೊಳ್ಳುವವರಿಗೆ ಗುಡ್ ನ್ಯೂಸ್ ನೀಡಿದೆ. ಮನೆ ನಿರ್ಮಾಣ ಸಂದರ್ಭದಲ್ಲಿ ಸೆಟ್ ಬ್ಯಾಕ್ ಬಿಡದೆ ಮನೆ ನಿರ್ಮಿಸಲು ಅವಕಾಶ ನೀಡಲಾಗಿದೆ.
ನಗರಾಭಿವೃದ್ಧಿ ಇಲಾಖೆ ಸೆಟ್ ಬ್ಯಾಕ್ನಲ್ಲಿ ವಿನಾಯಿತಿ ನೀಡಿ ಮಹತ್ವದಆದೇಶ ಹೊರಡಿಸಿದೆ. ಆ ಮೂಲಕ ಬೆಂಗಳೂರು ಜನರಿಗೆ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ಗಿಫ್ಟ್ ನೀಡಿದೆ. ಇದರಿಂದಾಗಿ ಸೆಟ್ ಬ್ಯಾಕ್ ಬಿಡದೆ ಸಮಸ್ಯೆ ಎದುರಿಸುತ್ತಿರುವ ಮನೆ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.
ನಿಯಮಗಳಲ್ಲಿ ಬದಲಾವಣೆ:
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೆಟ್ ಬ್ಯಾಕ್ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಆದೇಶಿಸಿದೆ.
ಈ ಮೊದಲು ಮನೆಗಳಿಗೆ ಸೆಟ್ ಬ್ಯಾಕ್ ಬಿಡುವ ಅವಶ್ಯಕತೆ ಇತ್ತು. ಆದರೆ ಸರ್ಕಾರ ಸೆಟ್ ಬ್ಯಾಕ್ ಕಡಿತ ಹಾಗೂ ವಿನಾಯಿತಿ ನೀಡಿದ್ದು, ಕಟ್ಟಡದ ಯಾವುದಾದರೂ ಒಂದು ಬದಿಯಲ್ಲಿ ಸೆಟ್ ಬ್ಯಾಕ್ ಬಿಟ್ಟರೆ ಸಾಕು. ಉಳಿದ ಮೂರು ಕಡೆಗಳಲ್ಲಿ ಯಾವುದೇ ಸೆಟ್ ಬ್ಯಾಕ್ ಬಿಡುವ ಅನಿವಾರ್ಯ ಇಲ್ಲ.
ಎಷ್ಟು ಸೆಟ್ ಬ್ಯಾಕ್ ಬಿಡಬೇಕು?
600 ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಕೇವಲ 0.60ಮೀ ಅಂದರೆ 2 ಅಡಿಗೆ ಇಳಿಕೆ ಮಾಡಲಾಗಿದೆ.
600 ಚದರ ಅಡಿ ಇಂದು 1,500 ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 0.70ಮೀ, ಅಂದರೆ 2.5 ಅಡಿಗೆ ಇಳಿಕೆ ಮಾಡಲಾಗಿದೆ.
1,500 ಚದರ ಅಡಿ ಇಂದ 2,500 ಚದರ ಅಡಿ ವರೆಗಿನ ಜಾಗದ ಮನೆಗಳಿಗೆ ಎಲ್ಲಾ ಬದಿಯಲ್ಲೂ ಕನಿಷ್ಠ 0.80ಮೀ ಅಂದರೆ 3 ಅಡಿ ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.
2,500 ಚದರ ಅಡಿಯಿಂದ 40 ಸಾವಿರ ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ 8% ನಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.
ಈ ಮೊದಲು 40 ಸಾವಿರ ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 12% ನಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯವಿತ್ತು. ಆದರೆ ಇದೀಗ 4% ನಷ್ಟು ಸೆಟ್ ಬ್ಯಾಕ್ ಏರಿಯಾ ಕಡಿತಗೊಳಿಸಲಾಗಿದೆ. ಇದು ಸದ್ಯಕ್ಕೆ ನಗರಲ್ಲಿರುವ ಎಲ್ಲಾ ಮನೆಗಳು ಮತ್ತು ಕಟ್ಟಡಗಳಿಗೂ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

