ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ನೌಕರರು ಕಡ್ಡಾಯವಾಗಿ ಖಾದಿ ಬಟ್ಟೆ ಬಳಕೆ ಮಾಡುಲಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸಲು ನಿರ್ಧರಿಸುವುದು ಕಡ್ಡಾಯ ಮಾಡಲಾಗಿದೆ. ಈ ಯೋಜನೆಗೆ ಏಪ್ರಿಲ್ 24ರಂದು ಚಾಲನೆ ನೀಡಲಾಗುತ್ತದೆ.
ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ, ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಸಂಬಂಧ ಹಾಗೂ ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ಮಾಡಿ ತೀರ್ಮಾನಿಸಲಾಗಿದೆ.
ಸಭೆಯ ನಿರ್ಧಾರಗಳು:
ಎಲ್ಲಾ ಅಧಿಕಾರಿ, ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವುದು.
ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸುವುದು.ಖಾದಿ ಗ್ರಾಮೋದ್ಯೋಗ ಮಂಡಳಿಯು ಹಾಲಿ ನೀಡುತ್ತಿರುವ ರಿಯಾಯಿತಿಯ ಹೊರತಾಗಿ ಅಧಿಕಾರಿ, ನೌಕರರಿಗೆ ಶೇ. 5% ಹೆಚ್ಚುವರಿ ರಿಯಾಯಿತಿ ನೀಡುವುದು.
ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್,ಪ್ಯಾಂಟ್, ಒವರ್ ಕೋಟ್ ಹಾಗೂ ಇತರೆ ಶಿಸ್ತಿನ ಉಡುಗೆಗಳು.
ಮಹಿಳಾ ನೌಕರರು ಖಾದಿ ಹಾಗೂ ಖಾದಿ ಸಿಲ್ಕ್ ಬಟ್ಟೆಯ ಸೀರೆ, ಚೂಡಿದಾರ್ ಇತರೆ ಶಿಸ್ತಿನ ಉಡುಗೆಗಳನ್ನು ತೊಡಬೇಕು ಎಂದು ಸೂಚಿಸಲಾಗಿದೆ.
ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್ಐಎಲ್ ಸಂಸ್ಥೆಯ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲು “ಸರ್ಕಾರಿ ನೌಕರರ ಕ್ಯಾಂಟೀನ್” ಪ್ರಾರಂಭಿಸಲು 2026-27ನೇ ಸಾಲಿನ ಆಯ-ವ್ಯಯದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡುವುದು.
ಕೆಎಸ್ಐಸಿ ಸಂಸ್ಥೆಯು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳಿಗೆ ಹೆಚ್ಚುವರಿ ಶೇ.5% ವಿಶೇಷ ರಿಯಾಯಿತಿ ನೀಡುತ್ತಿರುವ ಮಾದರಿಯಲ್ಲೇ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ, ನೌಕರರಿಗೂ ಹೆಚ್ಚುವರಿ ಶೇ. 5% ವಿಶೇಷ ರಿಯಾಯಿತಿ ನೀಡುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

