ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಪಿಎಲ್ ಕುಟುಂಬಗಳ ಪ್ರತಿ ಫಲಾನುಭವಿಗೆ ಹಣದ ಬದಲು ಅಕ್ಕಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆ.ಜಿ ಅಕ್ಕಿಗೆ ಪರ್ಯಾಯವಾಗಿ 170 ರೂ. ನೀಡಲಾಗುತ್ತಿತ್ತು. ಇದೀಗ, ಹಣದ ಬದಲು 10 ಕೆ.ಜಿ ಅಕ್ಕಿ ವಿತರಿಸಲು ತೀರ್ಮಾನಿಸಿದ್ದು, ಇದೇ ತಿಂಗಳಿನಿಂದ ಅಕ್ಕಿ ಕೊಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪಿಗೆ ಕೊಟ್ಟಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಅಕ್ಕಿ ಬೇಕಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರ ಮೊದಲು ಒಂದು ಕೆ.ಜಿ ಅಕ್ಕಿಗೆ 28 ರೂ. ನಿಗದಿಪಡಿಸಿತ್ತು. ಜನವರಿಯಿಂದ ಪ್ರತಿ ಕೆ.ಜಿಗೆ 22.50 ರೂ.ನಂತೆ ನೀಡಲು ನಿರ್ಧರಿಸಿದೆ. ದರ ಪರಿಷ್ಕರಣೆಹಿನ್ನೆಲೆಯಲ್ಲಿ ಮೂರು ತಿಂಗಳು ಹಣ ಹಾಕಿಲ್ಲ. ಒಂದು ವಾರದೊಳಗೆ ಹಣ ಹಾಕುತ್ತೇವೆ. ಫಲಾನುಭವಿಗಳಿಗೆ ಈಗಾಗಲೇ ನವೆಂಬರವರೆಗೂ ಹಣ ನೀಡಿದ್ದೇವೆ. ಜನವರಿವರೆಗೆ 5 ಕೆ.ಜಿ ಅಕ್ಕಿಗೆ 170 ರೂ.ಗಳಂತೆ ಹಣವನ್ನು ಡಿಬಿಟಿ ಮೂಲಕ ಹಾಕುತ್ತೇವೆ ಎಂದು ಸಚಿವರು ತಿಳಿಸಿದರು.
ಇದೇ ತಿಂಗಳ ಫೆಬ್ರವರಿಯಿಂದ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರಿಗೆ ಅಕ್ಕಿ, ಹಣ ಎರಡನ್ನೂ ಕೊಟ್ಟಿದ್ದೇವೆ ಎಂದು ತಿಳಿಸಿದರು.
ನಗದು ವರ್ಗಾವಣೆ: ಅಕ್ಟೋಬರ್-2024ರಲ್ಲಿ 1,16,39,179 ಕಾರ್ಡ್ಗಳ 4,12,16,838 ಫಲಾನುಭವಿಗಳಿಗೆ 676.79 ಕೋಟಿ ರೂ. ಡಿಬಿಟಿ ಬಿಡುಗಡೆ ಮಾಡಲಾಗಿದೆ. ಡಿಬಿಟಿ ಪ್ರಾರಂಭವಾದ ಜುಲೈ-2023ರಿಂದ ಅಕ್ಟೋಬರ್-2024ರವರೆಗೆ 10452.00 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳ ಡಿಬಿಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ನಗರ ಪ್ರದೇಶದಲ್ಲಿ ಶೇ.50 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.75 ಅಂತ್ಯೋದಯ/ ಆದ್ಯತಾ ಪಡಿತರ ಕಾರ್ಡ್‌ಗಳನ್ನು ವಿತರಣೆ ಮಾಡಲು ಅವಕಾಶವಿದೆ. ಕರ್ನಾಟಕದ ಜನಸಂಖ್ಯೆ 2011ರ ಜನಗಣತಿ ಪ್ರಕಾರ ನಗರ ಮತ್ತು ಗ್ರಾಮೀಣ ಸೇರಿ ಶೇ.65.96 ವಿತರಣೆ ಮಾಡಲಾಗಿದೆ ಎಂದು ವಿವರ ನೀಡಿದರು.
ಅನ್ನ ಸುವಿಧಾ ಯೋಜನೆ: 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅನ್ನ ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆ: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ, ಜೋಳ ಮತ್ತು ಭತ್ತ ಖರೀದಿಸಲು 366 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. 2024 ಡಿಸೆಂಬರ್ 1 ರಿಂದ 2025, ಮಾರ್ಚ್ 31 ರೊಳಗೆ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಕೃಷಿಮಾರಾಟ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು.
ರಾಗಿ, ಭತ್ತ, ಜೋಳ: ಕೇಂದ್ರ ಸರ್ಕಾರ ರಾಗಿಗೆ ಕನಿಷ್ಠ ಬೆಂಬಲ ಬೆಲೆ 4,290 ರೂ. ನಿಗದಿಪಡಿಸಿ ಖರೀದಿ ಗುರಿಯನ್ನು 4.40 LMT ನಿಗದಿಪಡಿಸಿದೆ. ಈಗಾಗಲೇ 3.6 LMT ಗುಣಮಟ್ಟದ ರಾಗಿ ನೀಡಲು 2,54,528 ರೈತರು ನೋಂದಾಯಿಸಿಕೊಂಡಿದ್ದಾರೆ. ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಅದೇ ರೀತಿ ಕೇಂದ್ರ ಸರ್ಕಾರ ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 2,300 ರೂ. “ಎ”ಗ್ರೇಡ್ ಭತ್ತಕ್ಕೆ 2,320 ರೂ. ನಿಗದಿಪಡಿಸಿ ಖರೀದಿ ಗುರಿಯನ್ನು 7.5 LMT ನಿಗದಿಪಡಿಸಿದೆ. ಈಗಾಗಲೇ 0.110 LMT ಭತ್ತ ನೀಡಲು 3,388 ರೈತರು ನೋಂದಾಯಿಸಿಕೊಂಡಿದ್ದು, ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ ಪ್ರತಿ ರೈತರಿಂದ 50 ಕ್ವಿಂಟಲ್ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಹೈಬ್ರೀಡ್ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ರೂ. 3,371 ರೂ., ಮಾಲ್ಡಂಡಿ ಜೋಳಕ್ಕೆ 3,421 ರೂ. ಕೇಂದ್ರ ನಿಗದಿಪಡಿಸಿ ಖರೀದಿ ಗುರಿಯನ್ನು 1.00 LMT ನಿಗದಿಪಡಿಸಿದೆ. ಈಗಾಗಲೇ 0.709 LMT ಜೋಳ ನೀಡಲು 17,527 ರೈತರು ನೋಂದಾಯಿಸಿಕೊಂಡಿರುತ್ತಾರೆ. ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ಪ್ರತಿ ರೈತರಿಂದ 150 ಕ್ವಿಂಟಲ್ ಖರೀದಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವ ಮುನಿಯಪ್ಪ ವಿವರಿಸಿದರು.
ಶಿಸ್ತುಕ್ರಮ-ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಯ್ದೆಗಳಾದ ಅಗತ್ಯ ವಸ್ತುಗಳು ಕಾಯ್ದೆ-1955, ಕಾಳಸಂತೆ ನಿಯಂತ್ರಣ ಕಾಯ್ದೆ-1980, ಆಹಾರ ಭದ್ರತಾ ಕಾಯ್ದೆ-2013 ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ-2019ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು.
ಕಾನೂನು ಮಾಪನಶಾಸ್ತ್ರ ಇಲಾಖೆ ಪುನಾರಚನೆ ಮಾಡಿ, ಅವರಿಗೆ ಅವಶ್ಯಕ ವಾಹನಗಳನ್ನು ಒದಗಿಸಿ, ಇಲಾಖೆಯ ಅಧಿಕಾರಿಗಳು ತಪಾಸಣಾ ಹೆಚ್ಚು ಮಾಡಲು ಗುರಿ ನಿಗದಿಪಡಿಸಲಾಗಿತ್ತು. ಇದರಿಂದ 2023-24ರಲ್ಲಿ ರಾಜಸ್ವ ಸಂಗ್ರಹಕ್ಕೆ 53.33 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು. 83.19 ಕೋಟಿ ರೂ. ರಾಜಸ್ವವನ್ನು ಸಂಗ್ರಹಿಸಲಾಗಿತ್ತು. 2024-25ನೇ ಸಾಲಿನಲ್ಲಿ 66 ಕೋಟಿ ರೂ. ರಾಜಸ್ವ ಸಮಗ್ರ ಗುರಿಯಿತ್ತು. ಜನವರಿ 63 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಮಾರ್ಚ್-2025ರ ಅಂತ್ಯಕ್ಕೆ 20 ಕೋಟಿ ರೂ. ರಾಜಸ್ವ ಸಂಗ್ರಹಿಸುವ ನಿರೀಕ್ಷೆ ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಮತ್ತು ದಂಡ ವಸೂಲಿ ಮಾಡಲು ನಿರ್ದೇಶನ ನೀಡಲಾಗಿದೆ. ಇಲಾಖೆಯಲ್ಲಿ ಬಹಳ ವರ್ಷಗಳಿಂದ ಇದ್ದ ಸರ್ವರ್ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಆಹಾರ ಇಲಾಖೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಪಡಿತರ ವಿತರಣೆ ಸಮರ್ಪಕವಾಗಿರಬೇಕು, ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಗೊಳಿಸಬೇಕು, ಸಗಟು ಮಳಿಗೆ ಮತ್ತು ನ್ಯಾಯ ಬೆಲೆ ಅಂಗಡಿಗಳನ್ನು ತಪಾಸಣಾ ಮಾಡಬೇಕು, ರಾಷ್ಟ್ರೀಯ ಭದ್ರತಾ ಕಾಯ್ದೆ ಆಶಯದಂತೆ ಪ್ರತಿಯೊಬ್ಬರಿಗೂ ಅನ್ನ, ಆಹಾರ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಇಲಾಖೆಯು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಇಲಾಖಾ ಕಾರ್ಯಕ್ರಮಗಳ ಜನಸ್ನೇಹಿಯಾಗಿ ಅನುಷ್ಠಾನಗೊಳ್ಳುವ ರೀತಿಯಲ್ಲಿ ಹೊಸ ತಂತ್ರಜ್ಞಾನ, ಬದಲಾವಣೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಸಚಿವ ಮುನಿಯಪ್ಪ ತಿಳಿಸಿದರು.
ಆಹಾರ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿಗಮದ ನಿರ್ದೇಶಕ ಚಂದ್ರಕಾಂತ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಎನ್.ಬಾಬು ಹಾಗೂ ಹಿರಿಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.