ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಐಪಿಎಸ್ ಮಹಿಳಾ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.
2000ನೇ ಬ್ಯಾಚ್ ಐಪಿಎಸ್ ಅಧಿಕಾರಿ ರೂಪಾ ಅವರನ್ನು ಐಜಿಪಿಯಿಂದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿಯಾಗಿ (ಎಡಿಜಿಪಿ) ಸರ್ಕಾರ ಮುಂಬಡ್ತಿ ನೀಡಿದೆ.
ಈಗ ಅವರನ್ನು ಇರುವ ಹುದ್ದೆಯಲ್ಲೇ ಸರ್ಕಾರ ಮುಂದುವರೆಸಿದೆ. ಕಳೆದ ಏಪ್ರಿಲ್ 25 ರಂದು ಮುಂಬಡ್ತಿಗಾಗಿ ಡಿ. ರೂಪಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯವಾಗಿ ತಮಗೆ ಸಿಗಬೇಕಾದ ಬಡ್ತಿ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ರೂಪಾ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ನ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿ, ಮುಂಬಡ್ತಿ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ರೂಪಾ ಅವರಿಗೆ ಸೂಚಿಸಿತ್ತು. ಇದೇ ವೇಳೆ, ಮನವಿ ಸಂಬಂಧ ಸರ್ಕಾರವು ಎಂಟು ವಾರಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿತ್ತು.