ಸರ್ಕಾರಿ ವಸತಿ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥ
ಚಂದ್ರವಳ್ಳಿ ನ್ಯೂಸ್, ಶಿರಾ
ಶಿರಾ ತಾಲೂಕಿನ ಲಕ್ಕನಹಳ್ಳಿ ಬಾಲಕರ ಸರ್ಕಾರಿ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿ ೧೪ ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಇಂದು ನಡೆದಿದೆ. ವಿದ್ಯಾರ್ಥಿಗಳನ್ನು ಶಿರಾ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಕ್ಕನಹಳ್ಳಿ ಬಾಲಕರ ವಸತಿ ಶಾಲೆಯ ವಾರ್ಡನ್ ಜಯಣ್ಣ ಮಾತನಾಡಿ, “ಪ್ರತಿ ಮಂಗಳವಾರ ಕೊಡುವಂತೆ ನಿನ್ನೆ(ಮಂಗಳವಾರ) ಮಕ್ಕಳಿಗೆ ಚಿಕನ್ ಕೊಟ್ಟಿದ್ದೆವು. ಇಂದು ಬೆಳಗ್ಗೆ ಇಡ್ಲಿ ಚಟ್ನಿ ಕೊಟ್ಟಿದ್ದೆವು.
ಶಾಲೆಯಲ್ಲಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎಂಬ ಮಾಹಿತಿ ನನಗೆ ಬಂತು. ಅಸ್ವಸ್ಥರಾದ ೧೪ ವಿದ್ಯಾರ್ಥಿಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕನ್ ಸೇವನೆಯಿಂದ ಫುಡ್ ಪಾಯ್ಸನ್ ಆಗಿರಬಹುದು ಎಂದು ವೈದ್ಯರು ಹೇಳಿದರು. ಸದ್ಯ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ” ಎಂದು ತಿಳಿಸಿದರು.