ಲೋಡ್ ಶೆಡ್ಡಿಂಗ್ ಮೂಲಕ ರಾಜ್ಯವನ್ನು ಕಗ್ಗತ್ತಲಿಗೆ ತಳ್ಳಿದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕಷ್ಟಗಳು ಕಾಣುವುದಿಲ್ಲ, ಜನಸಾಮಾನ್ಯರ ಬವಣೆ ಕೇಳುವುದೂ ಇಲ್ಲ. ಅಧಿಕಾರಕ್ಕೆ ಬಂದ ದಿನದಿಂದಲೂ ಹಂತ ಹಂತವಾಗಿ ವಿದ್ಯುತ್ ದರ ಏರಿಸಿ ನಾಡಿನ ಜನರಿಗೆ ಬರೆ ಎಳೆಯುತ್ತಿರುವ ಈ ಸರ್ಕಾರ ಲೋಡ್ ಶೆಡ್ಡಿಂಗ್ಮೂಲಕ ರಾಜ್ಯವನ್ನು ಕಗ್ಗತ್ತಲಿಗೆ ತಳ್ಳುತ್ತಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರಿತಪಿಸುವಂತೆ ಮಾಡಿರುವ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಿಲುವು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ.

ಗ್ಯಾರಂಟಿ ಜಾತ್ರೆಯಲ್ಲಿ ಮುಳುಗಿ ಅಭಿವೃದ್ಧಿಯೆಡೆಗೆ ಒಂದೇ ಒಂದು ಹೆಜ್ಜೆ ಇಡಲಾರದೆ ವಿದ್ಯುತ್ ಉತ್ಪಾದನಾ ಕ್ಷೇತ್ರದೆಡೆಗೆ ಕಿಂಚಿತ್ತೂ ಆಸಕ್ತಿ ತೋರಲಿಲ್ಲ, ಬಿರು ಬಿಸಿಲಿನ ಝಳ ಏರಿರುವ ಹೊತ್ತಲ್ಲಿ ಲೋಡ್ ಶೆಡ್ಡಿಂಗ್ ಹೇರಿ ನಾಡಿನ ರೈತ ಸಮುದಾಯ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಬೋರ್ವೆಲ್ ಇದ್ದರೂ ಅಸಹಾಯಕರಾಗಿ ಕೂರುವಂತೆ ಮಾಡಿರವುದು ದುರ್ದೈವೇ ಸರಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

 ಅಧಿಕಾರಕ್ಕೆ ಬಂದು 2 ವರ್ಷಗಳು ಕಳೆದರೂ ಅನ್ನದಾತರನ್ನು ಮೇಲೆತ್ತುವ ಒಂದೇ ಒಂದು ಯೋಜನೆ ರೂಪಿಸಲಿಲ್ಲ ಇನ್ನು ಸಮರ್ಪಕ 3 ಫೇಸ್ ವಿದ್ಯುತ್ ಅನ್ನೂ ಒದಗಿಸಲಾಗುತ್ತಿಲ್ಲ. ನೆರೆಹೊರೆಯ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದ ನಮ್ಮ ಕರ್ನಾಟಕ, ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತದಿಂದ ಅಘೋಷಿತ ಲೋಡ್ ಶೆಡ್ಡಿಂಗೆ ಸಿಲುಕುವ ಹಂತಕ್ಕೆ ತಲುಪುತ್ತಿರುವುದು ದುರದೃಷ್ಟಕರ ಸಂಗತಿ ಎಂದು ವಿಜಯೇಂದ್ರ ಕಿಡಿ ಕಾರಿದ್ದಾರೆ.

ನಾಡಿನ ಕೃಷಿಕರು ಹಾಗೂ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ವಿದ್ಯುತ್ ಕಲ್ಪಿಸಿ ಬೇಸಿಗೆಯ ಸಂದರ್ಭದಲ್ಲಿ ನೆರವಿಗೆ ನಿಲ್ಲದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಜನಾಕ್ರೋಶದ ಬಿಸಿ ತಟ್ಟದೇ ಬಿಡಲಾರದು ಎಂದು ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";