ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಶಾಲೆಗಳಲ್ಲಿ ನಾನಾ ಕಾರಣಗಳಿಂದ ಮಕ್ಕಳ ದಾಖಲಾತಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ. ಮಕ್ಕಳ ದಾಖಲಾತಿ ಇಳಿಕೆಗೆ ಪ್ರಮುಖವಾಗಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚುತ್ತಿರುವುದು ಇಳಿಕೆಗೆ ಕಾರಣವಾಗಿದ್ದು ಶಿಕ್ಷಣ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಒಂದೇ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ 2.25 ಲಕ್ಷದಷ್ಟು ಕಡಿಮೆ ಆಗಿರೋದು ಗಂಭೀರವಾಗಿದ್ದು ಇದರ ಬೆನ್ನಲ್ಲೇ ಇಲಾಖೆ ಅಲರ್ಟ್ ಆಗಿದೆ. ಏನಿದು ಹೊಸ ಯೋಜನೆ?
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಈಗಾಗಲೇ ಉಚಿತವಾಗಿ ಪುಸ್ತಕ, ಶೂ, ಬಟ್ಟೆ ಮತ್ತು ಮಧ್ಯಾಹ್ನದ ಊಟ ನೀಡುತ್ತಿದೆ. ಇದರ ಜೊತೆಗೆ ಇನ್ಮುಂದೆ ಓರ್ವ ವಿದ್ಯಾರ್ಥಿಗೆ 6 ನೋಟ್ ಬುಕ್ಗಳು, ವಾರದ ಐದು ದಿನ ಮೊಟ್ಟೆ ವಿತರಣೆ ಮಾಡಲಿದೆ. ಜನವರಿಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭದ ಜೊತೆಗೆ ಯಾವುದೇ ಶುಲ್ಕಗಳು ಇಲ್ಲದಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಲು ಕ್ಯಾಂಪೇನ್ನ ಕೂಡ ಇಲಾಖೆ ಆರಂಭಿಸಿದೆ.
ಅಧಿವೇಶನದಲ್ಲಿ ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 188 ಸರ್ಕಾರಿ ಶಾಲೆಗಳಲ್ಲಿ ಒಂದೂ ಪ್ರವೇಶವಾಗಿಲ್ಲ. ಇದರಲ್ಲಿ 160 ಕಿರಿಯ ಪ್ರಾಥಮಿಕ ಶಾಲೆಗಳು, 25 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 3 ಪ್ರೌಢಶಾಲೆಗಳಿವೆ.
ತುಮಕೂರು ಜಿಲ್ಲೆಯಲ್ಲಿ 45 ಶಾಲೆಗಳು ಸೇರಿದಂತೆ ಕಲಬುರಗಿ 21, ಕೋಲಾರ 20, ಕೊಪ್ಪಳ 18 ಮತ್ತು ಬೀದರ್ನಲ್ಲಿ 17 ಶಾಲೆಗಳು ಶೂನ್ಯ ದಾಖಲಾತಿ ಹೊಂದಿವೆ.
ಏಕೋಪಾಧ್ಯಾಯ ಶಾಲೆಗಳು:
ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 2018ರಲ್ಲಿ 3,450 ಇದ್ದು 2025-26ನೇ ಸಾಲಿನಲ್ಲಿ 6,675ಕ್ಕೆ ಏರಿಕೆ ಕಂಡಿದೆ. 1ರಿಂದ 5ನೇ ತರಗತಿವರೆಗೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರಾದರೂ ಇರಬೇಕು ಅಥವಾ ಕನಿಷ್ಠ 12 ಮಕ್ಕಳಿದ್ದರೆ ಇಬ್ಬರು ಶಿಕ್ಷಕರಿರಬೇಕೆಂಬ ನಿಯಮ ಇದೆ.
ಆದರೆ ಶಿಕ್ಷಕರ ಸಂಖ್ಯೆಯ ಕೊರತೆಯ ಕಾರಣ ಈ ನಿಯಮ ಪಾಲನೆ ಆಗುತ್ತಿಲ್ಲ. ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, 2028ರವೇಳೆಗೆ ಇನ್ನೂ 28 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ ಎನ್ನಲಾಗಿದೆ.

