ಸರ್ಕಾರಿ ಕೆಲಸ ದೇವರ ಕೆಲಸ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಲ್ಲಪ್ಪನಹಳ್ಳಿ ಕೆ ತಿಪ್ಪೇಸ್ವಾಮಿ ಅವರು ಬೆಸ್ಕಾಂ ವಿಭಾಗದ ನಿವೃತ್ತ ಚೀಫ್ ಇಂಜಿನಿಯರ್. ಹಿರಿಯೂರು ತಾಲ್ಲೂಕು ಮಲ್ಲಪ್ಪನಹಳ್ಳಿ ಇವರಿಗೆ ಜನ್ಮ ನೀಡಿದ ಊರು. ಕುಗ್ರಾಮದಿಂದ ರಾಜಧಾನಿ ತನಕ ಒಂದೊಂದೇ ಮೆಟ್ಟಿಲು ಹೇರಿದ ಸಾಧಕರು.
ಮಲ್ಲಪ್ಪನಹಳ್ಳಿಯ ದಿವಂಗತ ಕೆಂಪಲಿಂಗಯ್ಯ ಹಾಗೂ ದಿವಂಗತ ಶಾರದಮ್ಮ ಇವರ ಮಗನಾಗಿ ಜನಿಸಿದ ಕೆ ತಿಪ್ಪೇಸ್ವಾಮಿಯವರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಪರುಶುರಾಂಪುರ ಹಾಗೂ ಹರಿಯಬ್ಬೆ ಗ್ರಾಮದಲ್ಲಿ ಪಡೆದಿದ್ದಾರೆ.

ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ್ದಾರೆ. ದ್ವೀತಿಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಅಂಕಗಳನ್ನು ಪಡೆದ ಇವರಿಗೆ ದಾವಣಗೆರೆಯ ಪ್ರತಿಷ್ಠಿತ ಸರ್ಕಾರಿ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆಯಲು ಅವಕಾಶ ಸಿಗುತ್ತದೆ. ಎಲೆಕ್ಟ್ರಿಕಲ್ ವಿಭಾಗದಲ್ಲಿ ಇಂಜಿನಿಯರ್ ಪದವಿ ಪಡೆದ ಕೆಲವೇ ದಿನಗಳಲ್ಲಿ ಸರಿ ಸುಮಾರು 1985-86ರಲ್ಲಿ ಕೆಇಬಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರುತ್ತಾರೆ.

ಪ್ರಥಮವಾಗಿ ಕನಕಪುರ ತಾಲೂಕಿನ ಕೆಇಬಿ ಇಲಾಖೆಯಲ್ಲಿ ಸಹಾಯಕ  ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರು, ಚಳ್ಳಕೆರೆ, ದಾವಣಗೆರೆ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ ನಂತರ ಬೆಂಗಳೂರು ನಗರದಲ್ಲಿ ಹಲವು ವಿಭಾಗಗಳಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಉತ್ತಮ ಹೆಸರು ಗಳಿಸುತ್ತಾರೆ.

ಈ ಎಲ್ಲಾ ಪ್ರಾಂತ್ಯಗಳಲ್ಲಿ ಸರ್ಕಾರಿ ನೌಕರರ ಬಡ್ತಿಯ ನಿಯಮಾನುಸಾರ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸತತವಾಗಿ 35 ವರ್ಷಗಳ ಕಾಲ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಪರಿಕಲ್ಪನೆಯಲ್ಲಿ ವಿದ್ಯುತ್ ಬೆಸ್ಕಾಂ ಸಂಸ್ಥೆಯ ನಿಯಮಾವಳಿಗಳ ಪ್ರಕಾರವಾಗಿ ಗ್ರಾಹಕರ ಹಿತರಕ್ಷಣೆಗಾಗಿ ಬದ್ಧತೆ, ಸಾಮಾಜಿಕ ಹೊಣೆಗಾರಿಕೆಯಿಂದ ಕೆಲಸ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ವಲಯಕ್ಕೆ ಚೀಫ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಅವರ ಹುಟ್ಟೂರಾದ ಮಲ್ಲಪ್ಪನಹಳ್ಳಿಯಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿರುವ ಅವರು ಕೃಷಿಯತ್ತ ತಿರುಗಿದ್ದು ಸಣ್ಣ ಪ್ರಮಾಣದಲ್ಲಿ ಅಡಿಕೆ ಬೆಳೆ ಕೃಷಿಯಲ್ಲಿ ತಲ್ಲೀನರಾಗಿದ್ದಾರೆ.
ಲೇಖನ-ರಘು ಗೌಡ

 

 

Share This Article
error: Content is protected !!
";