ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಲು ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ಹೆಚ್ಚಿನ ಸ್ಪಷ್ಟನೆ ಕೋರಿ ರಾಜ್ಯಪಾಲ ಥಾವರ್‌ಚಂದ್‌ಗೆಹ್ಲೋಟ್ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಕರ್ನಾಟಕ ಮೈಕ್ರೋ ಫೈನಾನ್ಸ್(ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ-2025 ಕರಡನ್ನು ಕಳೆದ ವಾರ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿತ್ತು. ಇದೀಗ ರಾಜ್ಯಪಾಲ ಗೆಹ್ಲೋಟ್ ಕರಡು ಸುಗ್ರೀವಾಜ್ಞೆ ಸಂಬಂಧ ಹಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ಕೋರಿ ವಾಪಸ್ ಕಳುಹಿಸಿದ್ದು ಇದರಿಂದ ಒಂದಿಷ್ಟು ರಾಜ್ಯ ಸರ್ಕಾರಕ್ಕೆ ಹಿನ್ನೆಡೆಯಾಗಿದೆ ಎನ್ನಲಾಗುತ್ತಿದೆ.
ಸ್ಪಷ್ಟನೆ ಏನು?: ಸುಗ್ರೀವಾಜ್ಞೆಯಲ್ಲಿ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದಿರುವ ಸಾಲಗಾರರನ್ನು ಸಾಲ ಹಾಗೂ ಬಡ್ಡಿ ಮೊತ್ತದಿಂದ ಮುಕ್ತಗೊಳಿಸುವ ಅಂಶ ಸೇರಿಸಲಾಗಿದೆ. ಜೊತೆಗೆ, ಸಿವಿಲ್ ಕೋರ್ಟ್ಗಳು ಸಾಲಗಾರರ ವಿರುದ್ಧ ಸಾಲ ವಸೂಲಾತಿ ಸಂಬಂಧ ಯಾವುದೇ ವ್ಯಾಜ್ಯಗಳನ್ನು ಕೈಗೆತ್ತಿಕೊಳ್ಳಬಾರದು ಎಂಬ ಅಂಶವನ್ನು ಪ್ರಸ್ತಾಪಿಸಲಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದರೆ ಸಂತ್ರಸ್ತರನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಅದರ ಜೊತೆಗೆ ಅಗತ್ಯ ಇರುವ ವ್ಯಕ್ತಿಗೆ ಕಾನೂನಾತ್ಮಕವಾಗಿ ನಿಯಮದಂತೆ ಸಾಲ ನೀಡಿದ ಸಾಲದಾತರನ್ನು ರಕ್ಷಿಸುವುದು ಅಗತ್ಯ ಎಂದು ಉಲ್ಲೇಖಿಸಿ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.
ವ್ಯತಿರಿಕ್ತ: ಪಡೆದ ಸಾಲದಿಂದ ಮುಕ್ತಗೊಳಿಸಿದರೆ ಕಾನೂನುಬದ್ಧವಾಗಿ ಸಾಲ ನೀಡಿದ ಸಂಸ್ಥೆಗಳು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಅವರ ಮುಂದೆ ತಾವು ನೀಡಿರುವ ಸಾಲವನ್ನು ವಸೂಲಿ ಮಾಡುವ ಯಾವುದೇ ಆಯ್ಕೆಗಳಿರದೇ ಕಾನೂನು ಹೋರಾಟಕ್ಕೆ ಅನುವು ಮಾಡಿಕೊಡಲಿದೆ. ಇದು ಸಹಜ ನ್ಯಾಯಕ್ಕೆ ವ್ಯತಿರಿಕ್ತವಾಗುವ ಸಾಧ್ಯತೆ ಇದ್ದು, ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವ ಸಾಧ್ಯತೆ ಬಗ್ಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ ಎನ್ನಲಾಗಿದೆ.
ಸಾಲ ನೀಡಿಕೆ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಗರಿಷ್ಠ 10 ವರ್ಷ ಸೆರೆಮನೆವಾಸ ಹಾಗೂ 5 ಲಕ್ಷ ರೂ. ದಂಡ ವಿಧಿಸುವ ಅಂಶವನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸಲಾಗಿದೆ. ಮೈಕ್ರೋ ಫೈನಾನ್ಸ್ನಿಂದ ಗರಿಷ್ಠ 3 ಲಕ್ಷ ಸಾಲ ಪಡೆಯುವ ಮಿತಿ ಇರುವಾಗ, 5 ಲಕ್ಷ ದಂಡ ವಿಧಿಸುವುದು ಸಹಜ ಕಾನೂನು ತತ್ವದ ಉಲ್ಲಂಘನೆಯಾಗುವ ಸಾಧ್ಯತೆ ಇದೆ. ಜೊತೆಗೆ ಕರಡು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿತ ದಂಡದ ಮೊತ್ತವನ್ನು ಇದೇ ರೀತಿಯ ಅಪರಾಧಗಳಿಗೆ ಹಾಲಿ ಕಾನೂನಿನಡಿ ವಿಧಿಸುವ ದಂಡದ ಮೊತ್ತಕ್ಕೆ ಹೋಲಿಸಿದರೆ ಅಸಮಂಜಸದಿಂದ ಕೂಡಿದೆ. ಇದು ಸಹಜ ನ್ಯಾಯದ ತತ್ವಕ್ಕೆ ವ್ಯತಿರಿಕ್ತವಾಗಿದೆ ಎನ್ನುವ ಅಂಶವನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.
ಪ್ರತಿಕೂಲ ಪರಿಣಾಮ:
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆ ಕಟ್ಟಕಡೆಯ ಬಡವರಿಗೆ ಸಾಲ ನೀಡುವ ಸ್ವಸಹಾಯ ಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗೂ ರಾಜ್ಯದಲ್ಲಿನ ಸ್ವಸಹಾಯ ಸಂಘಗಳ ವಹಿವಾಟು ಮೇಲೆ ಪರಿಣಾಮಬೀರಲಿದೆ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆರ್ಬಿಐಯಡಿ ನೋಂದಾಯಿತ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸುಗ್ರೀವಾಜ್ಞೆ ಅನ್ವಯವಾಗುವುದಿಲ್ಲ. ಹಾಗಾಗಿ ಬಹುತೇಕ ಸಾಲ ನೀಡುವ ಸಂಸ್ಥೆಗಳು ಇದರಿಂದ ಹೊರಗುಳಿಯಲಿವೆ. ಈ ಸುಗ್ರೀವಾಜ್ಞೆ ಕೇವಲ ನೋಂದಾವಣೆಯಾಗದ ಹಾಗೂ ಪರವಾನಗಿ ಇಲ್ಲದ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಇಂತಹ ಹಣಕಾಸು ಏಜೆನ್ಸಿಗಳ ಕಿರುಕುಳದ ಮೇಲೆ ನಿಯಂತ್ರಣ ಹಾಕಲು ಈಗಾಗಲೇ ಹಲವು ಕಾನೂನುಗಳು ಜಾರಿಯಲ್ಲಿವೆ. ಕರ್ನಾಟಕ ಲೇವಾದೇವಿಗಾರರ ಕಾಯ್ದೆ 1961, NIA ಕಾಯ್ದೆ, ಕರ್ನಾಟಕ ಋಣಮುಕ್ತ ಕಾಯ್ದೆ, ಐಪಿಸಿ ಕಾಯ್ದೆಯಡಿ ಈ ಸಂಬಂಧ ನಿಯಂತ್ರಣ ಹೇರಲು ಹಲವು ನಿಯಮಾವಳಿಗಳಿವೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಇದಕ್ಕೆ ನಿಯಂತ್ರಣ ಹಾಕಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಉಪಟಳ ನಿಯಂತ್ರಿಸಲು ಅನುಕೂಲಕರವಾಗಲಿದೆ ಎಂಬ ಬಗ್ಗೆ ಸ್ಪಷ್ಟೀಕರಣ, ಅಂಕಿ ಅಂಶ, ಕಾನೂನು ಸಲಹೆಗಳನ್ನು ಕಡತದಲ್ಲಿ ಲಗತ್ತಿಸಿಲ್ಲ. ಮುಖ್ಯವಾಗಿ ಈ ಸುಗ್ರೀವಾಜ್ಞೆ ಸಾಲಗಾರರಿಗೆ ಅನುಕೂಲ ಮಾಡಿಕೊಡಲಿದೆ. ಆದರೆ ಸಮಾಜದ ಭಾಗವಾದ ಸಾಲದಾತನ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಈ ಅಂಶಗಳನ್ನು ವಿಧಾನಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸುವ ಅಗತ್ಯ ಇದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ತರಾತುರಿಯಲ್ಲಿ ಸುಗ್ರೀವಾಜ್ಞೆ ಜಾರಿಗೆ ತರುವ ಬದಲು ಬಜೆಟ್ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿ, ಸಂತ್ರಸ್ತರ ಹಿತರಕ್ಷಣೆಗಾಗಿ ಪರಿಣಾಮಕಾರಿ ಕಾನೂನು ತರುವುದು ಒಳಿತು. ಹೀಗಾಗಿ ಕೋರಲಾದ ಸ್ಪಷ್ಟನೆ, ವಿವರಣೆ, ಸಲಹೆಯೊಂದಿಗೆ ಕಡತವನ್ನು ಮರುಸಲ್ಲಿಕೆ ಮಾಡುವಂತೆ ರಾಜ್ಯಪಾಲರು ಸೂಚನೆ ನೀಡಿ ಸುಗ್ರೀವಾಜ್ಞೆ ಕರಡು ಪ್ರತಿಯನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.