ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ೧೮೮೦೦ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ, ಅದರಲ್ಲಿ ೬೨೦೦ ಕೋಟಿ ಹಣ ಸಾಲ ಮರುಪಾವತಿಗೆ ಹೋಗುತ್ತದೆ. ಉಳಿದಿರುವ ೧೨೬೦೦ ಕೋಟಿಯಲ್ಲಿ ಯುಕೆಪಿಗೆ ಒಂದೇ ಒಂದು ರೂಪಾಯಿ ಕೂಡ ನೀಡಿರುವುದಿಲ್ಲ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ್ ಕಾರಜೋಳ ಆರೋಪ ಮಾಡಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಇದಲ್ಲದೆ, ಜಲ ಸಂಪನ್ಮೂಲ ಇಲಾಖೆಯಲ್ಲಿ ಒಟ್ಟು ೧೬೬೦೦ ಕೋಟಿ ರೂಪಾಯಿಗಳನ್ನು ಗುತ್ತಿಗೆದಾರರಿಗೆ ಪೇಮೆಂಟ್ ಕೊಡಬೇಕಾದ ಬಿಲ್ಲುಗಳ ಬಾಕಿ ಇದೆ. ಹೀಗಾಗಿ ಜಲ ಸಂಪನ್ಮೂಲ ಇಲಾಖೆಗೆ ಈ ವರ್ಷ ಅನುದಾನನೇ ಇಲ್ಲದಂತಾಗಿದೆ. ಅದರಲ್ಲೂ ವಿಶೇಷವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ೩ನೇ ಹಂತದ ಕಾಮಗಾರಿಗಳಿಗೆ ಒಂದೇ ಒಂದು ರೂಪಾಯಿ ಸಹ ಅನುದಾನ ಕೊಟ್ಟಿರುವುದಿಲ್ಲ.
ಮತ್ತು ಮುಳುಗಡೆಯಾಗಿರುವ ೨೦ ಹಳ್ಳಿಗಳ ಪರಿಹಾರಕ್ಕೂ ಸಹ ಅನುದಾನ ನೀಡಿರುವುದಿಲ್ಲ ಎಂದು ದೂರಿದ್ದಾರೆ.
ಈಗಾಗಲೇ ೧೩೨೦೦೦ ಎಕರೆಯಲ್ಲಿ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ೨೭೦೦೦ ಎಕರೆಯಷ್ಟು ಭೂಮಿಯನ್ನು ನಾವು ಸ್ವಾಧೀನ ಪಡಿಸಿಕೊಂಡಿದ್ದೀವಿ. ಇನ್ನೂ ೧ ಲಕ್ಷಕ್ಕಿಂತಲೂ ಹೆಚ್ಚು ರೈತರ ಕೃಷಿ ಭೂಮಿಗೆ ಪರಿಹಾರ ನೀಡಲು ಸಹ ಅನುದಾನ ನೀಡಿರುವುದಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಜಿಲ್ಲೆಗೆ ಅದರಲ್ಲೂ ವಿಶೇಷವಾಗಿ ಬಾಗಲಕೋಟೆ ಜಿಲ್ಲೆ, ವಿಜಯಪುರ ಜಿಲ್ಲೆ, ಕೊಪ್ಪಳ ಜಿಲ್ಲೆ ಹಾಗೂ ಯಾದಗಿರಿ ಜಿಲ್ಲೆ ಈ ಜಿಲ್ಲೆಗಳಿಗೆ ನೀರಾವರಿ ಯೋಜನೆಗೆ ಅನುದಾನ ನೀಡದೆ ಸಿದ್ದರಾಮಯ್ಯನವರ ಸರ್ಕಾರ ದ್ರೋಹ ಮಾಡಿದೆ.
ಅದಕ್ಕಾಗಿ ಜನ ಪ್ರತಿನಿಧಿಗಳು, ಮಂತ್ರಿಗಳು ಎಲ್ಲಾರು ಸೇರಿ ಬಜೆಟ್ ಅನುಮೋದನೆ ಆಗುವುದಕ್ಕಿಂತಲೂ ಮುಂಚಿತವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ೧೫೦೦೦ ಕೋಟಿಗಳಷ್ಟು ಹಣ ನೀಡುವಂತೆ ಒತ್ತಾಯ ಮಾಡಬೇಕು ಎಂದು ನಾನು ಎಲ್ಲರಲ್ಲೂ ಆಗ್ರಹ ಮಾಡುತ್ತೇನೆ. ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಮನವಿ ಮಾಡುತ್ತೇನೆ. ಕೂಡಲೇ ಬಜೆಟ್ ಅನುಮೋದನೆ ಮಾಡುವಕ್ಕಿಂತಲೂ ಮುಂಚಿತವಾಗಿ ೧೫೦೦೦ ಕೋಟಿ ಕೃಷ್ಣ ಮೇಲ್ದಂಡೆ ಯೋಜನೆಗೆ ಮೀಸಲಿರಿಸುವಂತೆ ಸಂಸದರು ಒತ್ತಾಯಿಸಿದ್ದಾರೆ.

