ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಾಲು, ಸಾಲು ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಡಿಸೆಂಬರ್ ಅಂತ್ಯಕ್ಕೆ ಪತನಗೊಂಡು ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಭವಿಷ್ಯನುಡಿದಿದ್ದಾರೆ.
ಅವರು, ಭಾನುವಾರ ನಗರದ ವಾಲ್ಮೀಕಿ ಕಲ್ಯಾಣಮಂಟಪದಲ್ಲಿಬಿಜೆಪಿ ಜಿಲ್ಲಾನೂತನ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿಗೆ ಅಭಿನಂದನಾ ಸಮಾರಂಭ, ಚಳ್ಳಕೆರೆ ವಿವಿಧ ಮಂಡಲಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ನಿಗಮದಲ್ಲಿ 187 ಕೋಟಿ, ಎಸ್ ಸಿ, ಎಸ್ ಟಿ ಜನಾಂಗದ 34 ಸಾವಿರ ಕೋಟಿ, ಬೋವಿನಿಗಮಗಳಲ್ಲಿ ಹಗರಣ, ಭ್ರಷ್ಟಾಚಾರ ನಡೆಸಿ ಬಳ್ಳಾರಿ ಚುನಾವಣೆ ಮಾಡಿದ್ದಾರೆ.
ಇದರಿಂದ ಜನರು ಬೇಸತ್ತು ಕಾಂಗ್ರೆಸ್ ಪಕ್ಷವನ್ನು ತೀರಸ್ಕರಿಸಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡುವ ಕಾಲ ದೂರವಿಲ್ಲ. ಪ್ರಧಾನಮಂತ್ರಿ ನರೇಂದ್ರಮೋದಿಯವರ ನಿರಂತರ ಪರಿಶ್ರಮದಿಂದ ದೇಶದ ಆರ್ಥಿಕ ಸ್ಥಿತಿ 14ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿದೆ. ಇನ್ನೂ ಕೆಲವೇ ದಿನಗಳಲ್ಲಿ 3ನೇ ಸ್ಥಾನಕ್ಕೆ ಏರಲಿದೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಸ್ವಪಕ್ಷದ ಶಾಸಕರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಒಂದೆರಡು ಗ್ಯಾರಂಟಿ ನೀಡಿ ಹಾಲು, ವಿದ್ಯುತ್, ಬಸ್, ನೊಂದಣೆ ಶುಲ್ಕ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಬಿಜೆಪಿ ಪಕ್ಷ ಅಧಿಕಾರ ಸಮಯದಲ್ಲಿ ನಮ್ಮ ಜಿಲ್ಲೆಯನ್ನು ಕಡೆಗಣಿಸುತ್ತಿದೆ. ಹೊರ ಜಿಲ್ಲೆಯನ್ನು ಜಿಲ್ಲಾ ಉಸ್ತುವಾರಿಗಳಾಗಿ ಮಾಡಿ ಸ್ಥಳೀಯ ನಾಯಕರಿಗೆ, ಕಾರ್ಯಕರ್ತರಿಗೆ ಅನ್ಯಾಯ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಈ ಪದ್ದತಿ ಬದಲಾಗಬೇಕು. ಇದುವರೆಗೂ ಒಬ್ಬ ಸ್ಥಳೀಯ ಶಾಸಕ ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ನಿರ್ಗಮನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಸೂರನಹಳ್ಳಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ಎ.ಮುರುಳಿ, ಡಿ.ಸೋಮಶೇಖರ ಮಂಡಿಮಠ ಮಾತನಾಡಿ, ಕೆ.ಟಿ.ಕುಮಾರಸ್ವಾಮಿಗೆ ಸಂಪೂರ್ಣಬೆಂಬಲ ನೀಡುವ ಭರವಸೆ ನೀಡಿದರು.
ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಭಾರತೀಯ ಜನತಾಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಜಿಲ್ಲಾಧ್ಯಕ್ಷನನ್ನಾಗಿ ಜವಾಬ್ದಾರಿ ನೀಡಿದೆ. ಪಕ್ಷದ ಸಂಸದರೂ ಸೇರಿದಂತೆ ಎಲ್ಲಾ ನಾಯಕರ ಮಾರ್ಗದರ್ಶನದಿಂದ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಛಲದಿಂದ ಕಾರ್ಯನಿರ್ವಹಿಸುತ್ತೇನೆ. ಬಿಜೆಪಿ ಪಕ್ಷ ಕಳಂಕರಹಿತ ಪಕ್ಷವಾಗಿದೆ. ಎಲ್ಲಾ ಕಾರ್ಯಕರ್ತರು ಮುಖಂಡರ ಸಹಕಾರ ನನ್ನ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಮಂಡಲಾಧ್ಯಕ್ಷ ಬಿ.ಎಂ.ಸುರೇಶ್ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷ ವೆಂಕಟೇಶ್ಯಾದವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಲುವೇಹಳ್ಳಿಪಾಲಯ್ಯ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ, ಜಿಲ್ಲಾ ಎಸ್ಸಿಮೋರ್ಚಾ ಅಧ್ಯಕ್ಷ ಕರೀಕೆರೆತಿಪ್ಫೇಸ್ವಾಮಿ, ಮಧುಗಿರಿ ಅಧ್ಯಕ್ಷ ಹನುಮೇಗೌಡ, ಎನ್.ರಘುಮೂರ್ತಿ, ಬಿ.ಎಸ್.ಶಿವಪುತ್ರಪ್ಪ, ಎಸ್.ಯಲ್ಲಪ್ಪ, ಸಿ.ಎಸ್.ಪ್ರಸಾಧ್, ನಗರಸಭಾ ಸದಸ್ಯರಾದ ಎಸ್.ಜಯಣ್ಣ, ಪಾಲಮ್ಮ, ವೆಂಕಟೇಶ್, ಸಾಕಮ್ಮ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

