ಶಾಲಾ ಕೊಠಡಿಗಳ ದುರಸ್ತಿಗೆ ಶೀಘ್ರ  ಕ್ರಮವಹಿಸಿ- ಸಂಸದ ಗೋವಿಂದ ಎಂ ಕಾರಜೋಳ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಅಂಗನವಾಡಿ ಕಟ್ಟಡ ಹಾಗೂ ಶಾಲಾ ಕೊಠಡಿಗಳ ದುರಸ್ತಿಗೆ ಶೀಘ್ರ ಕ್ರಮವಹಿಸಬೇಕು ಎಂದು ಸಂಸದ ಗೋವಿಂದ ಎಂ.ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ  ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದು, ಶೌಚಾಲಯ, ಮೇಲ್ಛಾವಣಿ ಹಾಗೂ ಸ್ವಚ್ಛತೆ ಇಲ್ಲದೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಕಟ್ಟಡಗಳಿವೆ ಎಂಬುದಾಗಿ ಶಾಲಾ ಸ್ಥಿತಿಗತಿಗಳ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ, ನಾನೂ ಸಹ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ಗಮನಿಸಿದ್ದು, ಬಹುಶಃ ರಾಜ್ಯದಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಈ ಜಿಲ್ಲೆಯ ಶಾಲಾ ಕಟ್ಟಡಗಳು ಇವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಕೆಎಂಇಆರ್‍ಸಿ, ಡಿಎಂಎಫ್  ನಿಧಿ ಹಾಗೂ ರಾಜ್ಯ ಅನುದಾನ ಲಭ್ಯವಿದ್ದರೂ ಸಹ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮುಂದಿನ ಸಭೆಯೊಳಗೆ ಶೇ.100ರಷ್ಟು ಶಾಲಾ-ಅಂಗನವಾಡಿ ಕಟ್ಟಡಗಳ  ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ಶಾಲಾ-ಅಂಗನವಾಡಿ ಕಟ್ಟಡಗಳು  ನೀಟಾಗಿ ಕಾಣುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ನೆಪ ಹೇಳಬೇಡಿ ಎಂದು ತಾಕೀತು ಮಾಡಿದರು.

- Advertisement - 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಜಿಲ್ಲೆಯ 144 ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕೆಎಂಇಆರ್‍ಸಿ  ಅನುಮೋದನೆ ನೀಡಿದ್ದು, ಏಜೆನ್ಸಿ ನಿಗದಿಪಡಿಸಿ, ಮುಂಬರುವ ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

      ಜಿಲ್ಲೆಯಲ್ಲಿ 163 ಶಾಲಾ ಕೊಠಡಿಗಳು ದುರಸ್ತಿಯಲ್ಲಿದ್ದು, ಇದರಲ್ಲಿ ಈಗಾಗಲೇ 78 ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಂಡಿವೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಶೇ.50ರಷ್ಟು ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ಶೇ.55ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

- Advertisement - 

ಪಿಎಂಜಿಎಸ್‍ವೈ ಮಾರ್ಗಸೂಚಿ ಅನ್ವಯ ಪ್ರಸ್ತಾವ ಸಲ್ಲಿಸಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಜಾರಿಯಾಗಿದ್ದು, ಯೋಜನೆಗಾಗಿಯೇ ಕೇಂದ್ರ ಸರ್ಕಾರ ಈ ವರ್ಷ ಸುಮಾರು 36 ಸಾವಿರ ಕೋಟಿ ರೂ. ಅನುದಾನ ಒದಗಿಸಿದೆ.  ರಸ್ತೆ ಸಂಪರ್ಕ ಇಲ್ಲದ ಜನವಸತಿ ಪ್ರದೇಶಗಳನ್ನು ಕೂಡ ಗ್ರಾಮ ಎಂಬುದಾಗಿ ಪರಿಗಣಿಸಿ, ಹೊಸದಾಗಿ ರಸ್ತೆ ನಿರ್ಮಿಸಬೇಕು.  ಹೊಸ ಮಾರ್ಗಸೂಚಿ ಅನ್ವಯ ಪ್ರಸ್ತಾವ ಸಲ್ಲಿಸಬೇಕು ಎಂದು ಸಂಸದ ಗೋವಿಂದ ಎಂ.ಕಾರಜೋಳ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್‍ಗೆ ಸೂಚಿಸಿದರು.

 ವಿಧಾನಸಭಾ ಕ್ಷೇತ್ರವಾರು ರಸ್ತೆ ಸಂಪರ್ಕವಿಲ್ಲದೇ ಇರುವ ಗ್ರಾಮಗಳ, ಜನಸಂಖ್ಯೆ, ರಸ್ತೆಗಳ ವಿವರಗಳನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-4ರ ಪ್ರಸ್ತಾವನೆ ಸಲ್ಲಿಸಬೇಕು. ಎ.ಕೆ.ಕಾಲೋನಿ, ಗೊಲ್ಲರಹಟ್ಟಿಗಳನ್ನು ಸಹ ಗ್ರಾಮಗಳೆಂದು ಪರಿಗಣಿಸಿ, ಹೊರ ರಸ್ತೆ ನಿರ್ಮಿಸಲು ಆದ್ಯತೆ ನೀಡಬೇಕು. ಇದರಿಂದ ಜಿಲ್ಲೆಯ ಆರು ಉಪವಿಭಾಗಗಳಿಂದ ಒಟ್ಟು ರೂ.50 ರಿಂದ 60 ಕೋಟಿ ಅನುದಾನ ದೊರೆಯಲಿದೆ ಎಂದು ಹೇಳಿದರು.      

ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲ, ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಶವ ಪರೀಕ್ಷೆಗೆ ಚಳ್ಳಕೆರೆಗೆ ಕಳಿಸುತ್ತಾರೆ. ಇದರಿಂದಾಗಿ ಗಡಿ ಗ್ರಾಮದ ಜನರಿಗೆ ಬಹಳ ತೊಂದೆಯಾಗುತ್ತಿದೆ ಎಂದು ನಾಮನಿರ್ದೇಶಿತ ಸದಸ್ಯರು ಆರೋಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ತಳಕು ಪ್ರಾಥಮಿಕ ಆರೋಗ್ಯ ಕೇಂದ್ರ 24*7 ಕಾರ್ಯನಿರ್ವಹಿಸುತ್ತಿದೆ. ಎನ್‍ಹೆಚ್‍ಎಂ ಅಡಿಯಲ್ಲಿ ಓರ್ವ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂವರು ಶುಶ್ರೂಷಕರಲ್ಲಿ ಒಬ್ಬರು ರಾಜೀನಾಮೆ ನೀಡಿದ್ದು, ಒಬ್ಬರು ನಿಯೋಜನೆ ಮೇಲೆ ಇದ್ದಾರೆ. ಶೀಘ್ರವೇ ಇಬ್ಬರು ಶುಶ್ರೂಷಕರನ್ನು ಇಲ್ಲಿಗೆ ನಿಯೋಜನೆ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ದಿಶಾ ಸಭೆಯಲ್ಲೂ ಮಾರ್ಧನಿಸಿದ ಜೆಜೆಎಂ:
ಸೋಮವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜೆಜೆಎಂ ಯೋಜನೆಯ ಅಸಮರ್ಪಕ ಅನುಷ್ಠಾನದ ಬಗ್ಗೆ ವ್ಯಾಪಕ ಚರ್ಚೆಯಾಗಿ, ಯೋಜನೆ ಕಾಮಗಾರಿಗಳ ತನಿಖೆಗೆ ಸಮಿತಿ ರಚಿಸಲು ಸೂಚನೆ ನೀಡಿದ್ದರು.  ಇದೀಗ ದಿಶಾ ಸಭೆಯಲ್ಲಿಯೂ ಜೆಜೆಎಂ ಕಾಮಗಾರಿಗಳ ಬಗ್ಗೆ ಚರ್ಚೆ ನಡೆದಿದ್ದು, ಸಂಸದರು ಕೂಡ ಅಸಮಾಧಾನ ವ್ಯಕ್ತಪಡಿಸಿದರು.  ಜನರ ಶುದ್ಧ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಪ್ರತಿ ಮನೆ ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ (ಜೆಜೆಎಂ) ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಜೆಜೆಎಂ ಅಡಿಯಲ್ಲಿ ಜಿಲ್ಲೆಗೆ ರೂ.1000 ಕೋಟಿ ಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ ಈವರೆಗೂ ಕನಿಷ್ಟಪಕ್ಷ ಜಿಲ್ಲೆಯ 10 ಹಳ್ಳಿಗಳಿಗೂ ನಳಕ್ಕೆ ನೀರು ಬಂದಿಲ್ಲ ಎಂದು ಸಂಸದ ಗೋವಿಂದ ಎಂ.ಕಾರಜೋಳ ತೀವ್ರ  ಅಕ್ರೋಶ ವ್ಯಕ್ತಪಡಿಸಿದರು.

ಜಲಜೀವನ್ ಮಿಷನ್ ಸಮರ್ಪಕ  ಅನುಷ್ಠಾನದಿಂದ ನೀರಿನ ತೆರಿಗೆ ಸಂಗ್ರಹ ಜೊತೆಗೆ ನೀರಿನ ಉಳಿತಾಯವೂ ಆಗಲಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಗ್ರಾಮವೊಂದರಲ್ಲಿ ಪ್ರಾಯೋಗಿಕವಾಗಿ ತಾವು ಜಾರಿಗೊಳಿಸಿದ ಯೋಜನೆಯನ್ನು ಭಾರತ ಸರ್ಕಾರದ ಅಧಿಕಾರಿಗಳು ಬಂದು ನೋಡಿಕೊಂಡು ಹೋಗಿ, ಯೋಜನೆಯ ಯಶಸ್ವಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.  ಹೀಗಾಗಿ ದೇಶದಲ್ಲಿ ಜಲಜೀವನ್ ಮಿಷನ್ ಜಾರಿಗೆ ಒಂದು ರೀತಿಯಲ್ಲಿ ನಾನೇ ಕಾರಣ ಎಂದು ತಿಳಿಸಿದ ಸಂಸದರು, ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಅನುದಾನ ಅಪರಾಧಿಕ ದುರ್ಬಳಕೆಯಾಗಿದೆ.  ಹೀಗಾಗಿ ಜೆಜೆಎಂ ಕಾಮಗಾರಿಗಳ ಕುರಿತು ತನಿಖೆಗೆ ಸಮಿತಿ ರಚಿಸಲು ನಿರ್ಧರಿಸಿರುವುದು ಸೂಕ್ತವಾಗಿದೆ.  ಈ ಸಂಬಂಧ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಜವಾಬ್ದಾರಿ ನಿಗದಿಪಡಿಸುವಂತೆ ಸಂಸದರು ಸೂಚಿಸಿದರು.

ಹಾಸ್ಟೆಲ್‍ಗಳಲ್ಲಿ ಆಹಾರ ಸೇವಿಸಲು ಅಧಿಕಾರಿಗಳಿಗೆ ಸೂಚನೆ :
ಇತ್ತೀಚೆಗೆ ತಾವು ಹೊಸದುರ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ನನಗೆ ಘೇರಾವ್ ಹಾಕಿ, ಹಾಸ್ಟೆಲ್‍ನಲ್ಲಿ ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರ ನೀಡಿದ್ದರು.  ಸರ್ಕಾರ ಸೌಲಭ್ಯ ನೀಡಿದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮರ್ಪಕ ಸೌಲಭ್ಯ ದೊರೆಯುತ್ತಿಲ್ಲ, ಒಳ್ಳೆಯ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.  ಬಿಸಿಎಂ ಅಥವಾ ಪ.ಜಾತಿ ಮತ್ತು ಪ.ಪಂಗಡದ ಹಾಸ್ಟೆಲ್‍ಗಳಲ್ಲಿ ಮಕ್ಕಳಿಗೆ ಉತ್ತಮ ಸೌಲಭ್ಯ ನೀಡಬೇಕು.  ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಜರುಗಿಸಬೇಕು.  ಅಧಿಕಾರಿಗಳು ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಅಲ್ಲಿಯೇ ಆಹಾರ ಸೇವಿಸಬೇಕು.  ತಾವು ಕೂಡ ಜಿಲ್ಲೆಯ ಪ್ರವಾಸ ಸಂದರ್ಭದಲ್ಲಿ ಊಟದ ಸಮಯಕ್ಕೆ ಅಲ್ಲಿನ ಯಾವುದಾದರೂ ಹಾಸ್ಟೆಲ್‍ನಲ್ಲಿಯೇ ಊಟ ಸೇವಿಸುತ್ತೇನೆ.  ಕಳಪೆ ಕಂಡುಬಂದರೆ ಸ್ಥಳದಲ್ಲಿಯೇ ಅಮಾನತಿಗೆ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ನಾಮನಿರ್ದೇಶನ ಸದಸ್ಯರಾದ ಸಂತೋಷ್, ರಾಜಶೇಖರ್, ಲಕ್ಷ್ಮಣ್, ವೆಂಕಟಲಕ್ಷ್ಮೀ, ಗೋವಿಂದಪ್ಪ, ಭರತ್, ಕೆ.ಟಿ.ಕುಮಾರಸ್ವಾಮಿ, ಟಿ. ಮಂಜುಳಾ, ಜಿಲ್ಲಾ  ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್. ಗಾಯತ್ರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

 

 

 

Share This Article
error: Content is protected !!
";